ಕೆಎಸ್‌ಆರ್‌ಟಿಸಿ ಬಸ್‌ನಲ್ಲಿನ ಪ್ರಯಾಣ ದರವನ್ನು ಏರಿಕೆ ಮಾಡಲಾಗಿರುವ ಹಿನ್ನೆಲೆ, ವ್ಯಕ್ತಿಯೊಬ್ಬ ‘ಯಾರನ್ನು ಕೇಳಿ ಟಿಕೆಟ್ ದರ ಹೆಚ್ಚಿಸಿದ್ದೀರಿ’ ಎಂದು ಕಂಡಕ್ಟರ್ (ನಿರ್ವಾಹಕ) ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಜನವರಿ ಮೊದಲ ವಾರದಲ್ಲಿ, ಕೆಎಸ್‌ಆರ್‌ಟಿಸಿ 15% ಟಿಕೆಟ್ ದರ ಏರಿಸಿದೆ. ಆ ಸಂದರ್ಭದಲ್ಲಿ ದರ ಏರಿಕೆಯ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿದ್ದವು. ಆಕ್ರೋಶವೂ ವ್ಯಕ್ತವಾಗಿತ್ತು. ಆದಾಗ್ಯೂ, ಈಗ ಟಿಕೆಟ್ ದರ ಏರಿಕೆ ಕಾರಣಕ್ಕೆ ನಿರ್ವಾಹಕನ ಮೇಲೆ ಹಲ್ಲೆ ಮಾಡಲಾಗಿದೆ.
ಕೊಪ್ಪಳ ಜಿಲ್ಲೆಯ ಹುಲಗಿ ಗ್ರಾಮದಿಂದ ಗಂಗಾವತಿಗೆ ತೆರಳುತ್ತಿದ್ದ ಬಸ್‌ನಲ್ಲಿ ನಿರ್ವಾಹಕ ಹನುಮಪ್ಪ ಮೇಲೆ ಹಲ್ಲೆ ನಡೆಸಲಾಗಿದೆ. ಹುಲಗಿಯಲ್ಲಿ ಬಸ್ ಹತ್ತಿದ ಪ್ರಯಾಣಿಕ ಶ್ರೀಧರ್, ‘ಈ ಹಿಂದೆ ಹುಲಗಿಯಿಂದ ಗಂಗಾವತಿಗೆ 26 ರೂ. ಇತ್ತು. ಈಗ, 30 ರೂ. ಆಗಿದೆ. ಯಾರನ್ನು ಕೇಳಿ ಟಿಕೆಟ್ ದರ ಹೆಚ್ಚಿಸಿದ್ದೀರಿ’ ಎಂದು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾರೆ. ಆತ ಮದ್ಯ ಸೇವಿಸಿದ್ದ ಎಂದು ಹೇಳಲಾಗಿದೆ.
ನಿರ್ವಾಹಕ ವಿರುದ್ಧ ಆರೋಪಿ ಶ್ರೀಧರ್ ಅವಾಚ್ಯವಾಗಿ ನಿಂದಿಸಿದ್ದಾನೆ. ಆತನ ದುರ್ವರ್ತನೆಯ ಕಾರಣಕ್ಕೆ ಮಾರ್ಗ ಮಧ್ಯೆ ವಿರುಪಾಪುಯರ ಬಳಿ ಬಸ್ ನಿಲ್ಲಿಸಲಾಗಿದೆ. ಬಸ್ ನಿಲ್ಲುತ್ತಿದ್ದಂತೆ ನಿರ್ವಾಹಕನನ್ನು ಬಸ್‌ನಿಂದ ಕೆಳಗೆ ಎಳೆದೊಯ್ದ ಶ್ರೀಧರ್, ಕಲ್ಲು ತೆಗೆದುಕೊಂಡು ನಿರ್ವಾಹಕ ಹನುಮಪ್ಪ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ನಿರ್ವಾಹಕ ಹನುಮಪ್ಪ ಅವರ ಹಣೆ ಮತ್ತು ಕಣ್ಣಿಗೆ ಪೆಟ್ಟು ಬಿದ್ದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.