ದಲಿತರ ಮನೆಯ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಕುರುಬ ಸಮುದಾಯದವರು ದಲಿತರ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಜಮಪುರ ಗ್ರಾಮದಲ್ಲಿ ನಡೆದಿದೆ.
ಕಾರಟಗಿ ತಾಲೂಕಿನ ಜಮಪುರ ಗ್ರಾಮದಲ್ಲಿ ಹಲ್ಲೆಗೊಳಗಾದ ಗಾಯಾಳುಗಳನ್ನು ಹತ್ತಿರದ ಕಾರಟಗಿ ಉಪವಿಭಾಗ ಆಸ್ಪತ್ರೆ ಮತ್ತು ಗಂಗಾವತಿ ಉಪವಿಭಾಗ ಆಸ್ಪತ್ರೆಯ ತೀವ್ರ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಅವರು ತಮ್ಮ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ದಲಿತ ಮನೆಯ ಪಕ್ಕದಲ್ಲಿ ಶೌಚಾಲಯ ಕಟ್ಟಿಸಬೇಡಿ, ಸರ್ಕಾರದ ಜಾಗ ಗುರುತಿಸಿ ಶೌಚಾಲಯ ನಿರ್ಮಿಸಿ ಎಂದು ಹೇಳಿದ್ದಕ್ಕೆ, ಕುರುಬ, ಸವರ್ಣಿಯರು ಹಾಗೂ ದಲಿತರ ಮಧ್ಯೆ ವಾದ ವಿವಾದ ಉಂಟಾಗಿ ಘರ್ಷಣೆಯಾಗಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

“ದಲಿತ ಏರಿಯಾದಲ್ಲಿ ಸರಿಯಾಗಿ ಮೂಲಭೂತ ವ್ಯವಸ್ಥೆಯಿಲ್ಲದೆ ಕತ್ತಲೆ ಕೋಣೆಯಲ್ಲಿ ಬದುಕು ಸಾಗಿಸುವ ಮಧ್ಯೆ ಮನೆಯ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೆ ದುರ್ವಾಸನೆ ಬೀರುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಇದನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಪ್ರಶ್ನಿಸಿದ ಕಾರಣಕ್ಕೆ ಘರ್ಷಣೆಯಾಗಿದೆ” ಎಂದು ನಿವಾಸಿಯೊಬ್ಬರು ತಿಳಿಸಿದರು.
“ಸುಮಾರು 30ಕ್ಕಿಂತ ಹೆಚ್ಚು ಜನರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಕೆಲವರಿಗೆ ಗಂಭೀರ ಗಾಯಗೊಂಡು ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ” ಎಂದು ತಿಳಿಸಿದರು.
“ಶೌಚಾಲಯ ಬೇರೆಡೆಗೆ ನಿರ್ಮಿಸಬೇಕೆಂದು ಹಲವು ಬಾರಿ ಗ್ರಾಮದಲ್ಲಿ ಸಭೆಗಳಾಗಿವೆ. ಪಿಡಿಒ, ತಾಲೂಕು ಅಧಿಕಾರಿ, ತಹಶೀಲ್ದಾರ್ ಕೂಡ ಗ್ರಾಮದಲ್ಲಿ ಸಭೆ ನಡೆಸಿ ತೆರಳಿದ ನಂತರ ವಿವಾದ ಉಂಟಾಗಿದೆ. ದಲಿತರ ಮೇಲೆ ಹಲ್ಲೆಯಾಗಿದೆಯೆಂದು ಕಾರಟಗಿ ಪೊಲೀಸ್ ಠಾಣೆಯ ಮುಂದೆ ಸುಮಾರು 100ಕ್ಕಿಂತ ಜನ ಜಮಾಯಿಸಿದ್ದಾರೆ. ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮುಂದಾದರೆ ಪೊಲೀಸರೂ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ” ಎಂದು ಸಂಘಟನಾ ಮುಖಂಡರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪಿಡಿಓ, ಅಧಿಕಾರ ದುರ್ಬಳಕೆ ಆರೋಪ: ಕೂಲಿ ಕಾರ್ಮಿಕರು ಧರಣಿ
“ಕೊಪ್ಪಳ ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರವಾಗಿ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಂವಿಧಾನದ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು. ದಲಿತರಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
