ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೊಸದಾಗಿ ಜಾರಿಗೊಳಿಸಿರುವ ಗುರುತಿನ ಅರ್ಜಿಯನ್ನು ರದ್ದುಗೊಳಿಸುವುದು ಸೇರಿ ಕಟ್ಟಡ ಹಾಗೂ ಇತರೆ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಟ್ಟಡ ಕಾರ್ಮಿಕರ ಹೋರಾಟ ಸಮಿತಿ ಗಂಗಾವತಿ ಘಟಕ ಆಗ್ರಹಿಸಿತು.
ಕೊಪ್ಪಳ ನಗರದ ಜಿಲ್ಲಾ ಕ್ರಿಡಾಂಗಣದಿಂದ ಅಶೋಕ ವೃತ್ತದ ಮೂಲಕ ಹಾದು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬೇಡಿಕೆ ಇಡೇರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಸಂಚಾಲಕ ಎ.ಎಲ್ ತಿಮ್ಮಣ್ಣ ಮಾತನಾಡಿ, “ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ನೀಡಲಾಗುವ ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶವನ್ನು ವಾಪಸ್ ಪಡೆಯಬೇಕು ಹಾಗೂ 2021ರ ಹೈಕೋರ್ಟ್ ಆದೇಶ ಅಧಿಸೂಚನೆ ಪ್ರಕಾರ ಸ್ಥಗಿತಗೊಳಿಸಿರುವ ಶೈಕ್ಷಣಿಕ ಧನ ಸಹಾಯವನ್ನು ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ಕಾರ್ಮಿಕರ ಮುಖಂಡ ಮೆಹಬೂಬ್ ಅಲಿ ಮಾತನಾಡಿ, “ಹಲವಾರು ತಿಂಗಳಿಂದ ಮಂಜೂರಾತಿ ಪಡೆದ ಫಲಾನುಭವಿಗಳಿಗೆ ಧನಸಹಾಯ ಬಿಡುಗಡೆ ಮಾಡಬೇಕು. ಪಿಂಚಣಿದಾರರಿಗೆ ಶೀಘ್ರವೇ ಅವರ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು. ಪಿಂಚಣಿಯನ್ನು 60 ವರ್ಷಕ್ಕೆ ಇರುವ ನಿಯಮವನ್ನು ಕಡಿತಗೊಳಿಸಿ ಕಾರ್ಮಿಕರಿಗೆ 50 ವರ್ಷಕ್ಕೆ ಪಿಂಚಣಿ ನೀಡಬೇಕು. ನೈಜ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸುವುದನ್ನು ಕೂಡಲೆ ನಿಲ್ಲಿಸಬೇಕು” ಎಂದು ಆಗ್ರಹಿಸಿದರು.

ಕಾರ್ಮಿಕ ಮಹಿಳೆ ದುರ್ಗಮ್ಮ ಮಾತನಾಡಿ, “ಸೇವಾ ಸಿಂಧುವಿನಲ್ಲಿ ಮಂಜುರಾತಿಯಾದ ಅರ್ಜಿಗಳ ಫಲಾನುಭವಿಗಳ ಬಾಂಡ್ ಹಾಗೂ ಸಹಾಯಧನದ ಕುರಿತು ಮಂಡಳಿ ಹೊರಡಿಸಿದ ಆದೇಶದ ದಿನಾಂಕ ಕಟ್ಟಡ ಕಾರ್ಮಿಕರಿಗೆ ಸರಿಯಾದ ಮಾಹಿತಿ ಇಲ್ಲವಾದರಿಂದ ಸರಿಯಾದ ಸಮಯಕ್ಕೆ ಸಲ್ಲಿಸುವುದಕ್ಕೆ ಆಗಿರುವುದಿಲ್ಲ ಹಾಗಾಗಿ ಕಾರ್ಮಿಕರ ಬಾಕಿ ಉಳಿದ, ಮಂಜುರಾತಿಯಾದ ಫಲಾನುಭವಿಗಳಿಗೆ ಧನ ಸಹಾಯ ಬಿಡುಗಡೆ ಮಾಡಬೇಕು. ಹೆರಿಗೆ ಧನಸಹಾಯವನ್ನು ಬಾಂಡ್ ರೂಪದಲ್ಲಿ ನೀಡುತ್ತಿದ್ದು ಅದನ್ನು ಹಣದ ರೂಪದಲ್ಲಿ ನೀಡಬೇಕು. ಹೆರಿಗೆ ನಂತರ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ಸುಮಾರು 4 ರಿಂದ 5 ತಿಂಗಳು ವಿನಾಯಿತಿ ನೀಡಬೇಕು. ಆ ಸಮಯದಲ್ಲಿ ಸಹಾಯಧನ ನೀಡಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕೊಪ್ಪಳ | ಕಚೇರಿ ವೇಳೆ ಬದಲಾದರೂ ಬದಲಾಗದ ನೌಕರರು
ಶಿವಕುಮಾರ್ ಗೌಡ ಮಾತನಾಡಿ, “ಕರ್ನಾಟಕದ ಪ್ರತಿ ತಾಲೂಕುಗಳಲ್ಲಿ ಬಡ ಕಾರ್ಮಿಕರ ಅನುಕೂಲಕ್ಕಾಗಿ 5 ಕೋಟಿ ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಿಸಿಕೊಡಬೇಕು. ಕಾರ್ಮಿಕರಿಗೆ ವೈದ್ಯಕೀಯ ಅರ್ಜಿಯ ಸಲ್ಲಿಸಲು ಪ್ರತಿ ತಾಲೂಕಿಗೆ ಒಂದರಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿ ನಗದು ರಹಿತ ಚಿಕಿತ್ಸೆ ನೀಡಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೀಡುಲಾಗುತ್ತಿರುವ ಮದುವೆ ಸಹಾಯಧನವನ್ನು ರೂ. 60,000 ದಿಂದ 1,00,000ಕ್ಕೆ ಹೆಚ್ಚಿಸಬೇಕು” ಎಂದು ಆಗ್ರಹಿಸಿದರು.