ಧರ್ಮಸ್ಥಳದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿತು.
ಕೊಪ್ಪಳ ನಗರ ಪ್ರಗತಿಪರ ಸಂಘಟನೆಗಳ ಒಕ್ಕೂಟ ಧರ್ಮಸ್ಥಳ ಧರ್ಮಾಧಿಕಾರಿಗಳನ್ನು ಉನ್ನತ ತನಿಖೆಗೆ ಒಳಪಡಿಸಬೇಕು ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.
ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ಜಿಲ್ಲಾ ಕಾರ್ಯದರ್ಶಿ ಕೆ ಬಿ ಗೋನಾಳ ಮಾತನಾಡಿ, “ಸೌಜನ್ಯ ಸೋದರಿ ಕೊಲೆಯಾದ ದಿನದಿಂದ ಉನ್ನತ ತನಿಖೆಗೆ ಹಲವಾರು ಹೋರಾಟಗಾರರು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರಗಳು ಧರ್ಮಸ್ಥಳ ಧರ್ಮಾಧಿಕಾರಿಯನ್ನು ರಕ್ಷಣೆ ಮಾಡುತ್ತಿವೆಯಷ್ಟೆ. ನಿಜ ಅಪರಾಧಿಯನ್ನು ಕಂಡುಹಿಡಿಯುವ ಗೋಜಿಗೇ ಹೋಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಸೌಜನ್ಯ ಪ್ರಕರಣ ತೀವ್ರತೆ ಪಡೆದು, ದಿನದಿಂದ ದಿನಕ್ಕೆ ಅದರ ಕಾವು ಹೆಚ್ಚುತ್ತಿದ್ದಂತೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಸೌಜನ್ಯಳ ತಾಯಿ ಕುಸುಮಾವತಿ ಈ ಪ್ರಕರಣಕ್ಕೂ ಸಂತೋಷರಾವ್‌ಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಒತ್ತಿ ಹೇಳಿದರೂ ಅಧಿಕಾರಿಗಳು ಅವರ ಹೇಳಿಕೆಯನ್ನು ಪರಿಗಣಿಸಲಿಲ್ಲ” ಎಂದು ಪೊಲೀಸ್ ತನಿಖೆ ಕುರಿತು ಶಂಕೆ ವ್ಯಕ್ತಪಡಿಸಿದರು.

ಮಂಜುಳಾ ಹೊಸಳ್ಳಿ ಮಾತನಾಡಿ, “12 ವರ್ಷಗಳಾದರೂ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗುತ್ತಿಲ್ಲ. ನಾವು ಎಂತ ಕಾಲದಲ್ಲಿದ್ದೇವೆ? ಈ ಪ್ರಕರಣದಿಂದ ಹೆಣ್ಮಕ್ಕಳನ್ನ ಮನೆ ಹೊರ ಕಳಿಸುವುದಕ್ಕೂ ಭಯಪಡುವಂತ ಸ್ಥಿತಿಗೆ ತಲುಪಿದ್ದೇವೆ. ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಆದಾಗ ನ್ಯಾಯಾಲಯಕ್ಕೆ ನ್ಯಾಯ ಕೇಳೋದಕ್ಕೆ ಸಂತ್ರಸ್ತರು ಹೋಗಬೇಕು; ಆದರೆ, ಆರೋಪಿ ಸ್ಥಾನದಲ್ಲಿರುವವರು ತಮ್ಮನ್ನು ಬಂಧಿಸಬಹುದೆಂಬ ಭಯದಿಂದ ನ್ಯಾಯಾಲಯದ ಮೆಟ್ಟಿಲೇರಿ ಹೋರಾಟಗಳಾಗದಂತೆ ತಡೆಯಾಜ್ಞೆ ತರುತ್ತಾರೆ ಎಂಥ ವಿಪರ್ಯಾಸ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುಷ್ಪ ಮೇಸ್ತ್ರಿ ಮಾತನಾಡಿ, “ಸೌಜನ್ಯ ಕೊಲೆಯ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಹೋದರ ಸಂಬಂಧಿಗಳ ಕೈವಾಡವಿದೆ ಎಂಬ ಆರೋಪಗಳು ದಟ್ಟವಾಗಿ ಕೇಳಿ ಬರುತ್ತಿವೆ. ಸರ್ಕಾರ ಪ್ರಭಾವಿಗಳ ಮುಲಾಜಿಗೆ ಒಳಗಾಗಿ ನಿಜವಾದ ಆರೋಪಿಗಳನ್ನು ಬಂಧಿಸುತ್ತಿಲ್ಲ. ಕೊಲೆಗಡುಕರ ರಕ್ಷಣೆಗೆ ನಿಂತಿರುವುದು ದುರಂತ. ರಾಜಕೀಯ ಪಕ್ಷಗಳ ಮುಖಂಡರು, ಧರ್ಮಪರ ಸಂಘಟನೆಗಳು ಆ ಕುಟುಂಬಕ್ಕೆ ನ್ಯಾಯ ಕೊಡಿಸಲು ಮುಂದಾಗುತ್ತಿಲ್ಲ ಕೊನೆ ಪಕ್ಷ ಒಂದು ಮಾತನ್ನೂ ಅಡುತ್ತಿಲ್ಲ” ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೊಪ್ಪಳ | ಕಚೇರಿ ವೇಳೆ ಬದಲಾದರೂ ಬದಲಾಗದ ನೌಕರರು
ಬಸವರಾಜ ಶೀಲವಂತರ, ಗಾಳೆಪ್ಪ ಮುಂಗೋಲಿ, ಸಂಜಯದಾಸ್ ಕೌಜಗೇರಿ, ಕೆ ಬಿ ಗೋನಾಳ, ಹನ್ಮಂತಪ್ಪ ಹುಲಿಹೈದರ, ಮಕ್ಬೂಲ್ ರಾಯಚೂರು, ಪಾಮಣ್ಣ ಕನಕಗಿರಿ, ಖಾಸೀಮ ಸರದಾರ, ಹನ್ಮಂತಪ್ಪ ಹೊಳೆಯಾಚೆ, ಪುಷ್ಪಾ ಮೇಸ್ತ್ರಿ, ಮಂಜುಳಾ ಹೊಸಳ್ಳಿ ಹಾಗೂ ಇತರರಿದ್ದರು.