ಬಿಸಿಯೂಟ ನೌಕರರ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಮತ್ತು ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ಸಂಘಟನೆಗಳ ಕಾರ್ಮಿಕರು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
“ವ್ಯಾಪಾರ ವಹಿವಾಟು ಹಾಗೂ ಜೀವನಾವಶ್ಯಕ ವಸ್ತಗಳ ಸಾಗಾಣಿಕೆಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುವ- ಕನಿಷ್ಠ ಸೌಲಭ್ಯ ಮತ್ತು ಸಾಮಾಜಿಕ ಭದ್ರತೆಯಿಂದ ವಂಚಿತರಾಗಿರುವ ಶ್ರಮಜೀವಿಗಳಾದ ಹಮಾಲಿ ಕಾರ್ಮಿಕರು, ಉತ್ಪನ್ನ ಮಾರುಕಟ್ಟೆ(ಎಪಿಎಂಸಿ) ಗಿರಣಿಗಳಲ್ಲಿ, ಪಾನೀಯ ನಿಗಮ, ಅನ್ಯಭಾಗ್ಯ, ಸಿಎ, ಕೇಂದ್ರ ಹಾಗೂ ರಾಜ್ಯ ಉಗ್ರಾಣಗಳು ಸೇರಿದಂತೆ ಮುಂತಾದ ಸರ್ಕಾರಿ ಮತ್ತು ಖಾಸಗಿ ಗೋಡೌನ್ ವೇರ್‌ಹೌಸ್, ಗರ ಹಾಗೂ ಗ್ರಾಮೀಣ ಬಜಾರ, ಬಸ್‌ಸ್ಟ್ಯಾಂಡ್, ರೈಲು ನಿಲ್ದಾಣ, ಬಂದರುಗಳಲ್ಲಿ ಸುಮಾರು 4 ರಿಂದ 5 ಲಕ್ಷದಷ್ಟು ಹಮಾಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ” ಎಂದು ಪ್ರತಿಭಟನಾಕಾರರು ತಿಳಿಸಿದರು.
“ಈ ವಿಭಾಗಗಳ ಹಮಾಲಿ ಕಾರ್ಮಿಕರು ತಮ್ಮ ಬದುಕಿನ ಮುಖ್ಯ ಪ್ರಶ್ನೆಗಳಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದರೂ ಕೂಡಾ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಅವರ ಪ್ರಮುಖ ಬೇಡಿಕೆಗಳು ಈಡೇರದೆ ನನೆಗುದಿಗೆ ಬಿದ್ದಿವೆ. ಈಗಲಾದರೂ ಈ ಶ್ರಮಜೀವಿಗಳ ಬೇಡಿಕೆಗಳನ್ನು ಈಡೇರಿಸಲು ತಾವು ವಿಶೇಷ ಮುತುವರ್ಜಿ ವಹಿಸಬೇಕು. ಹೈಕೋರ್ಟ್ ಆದೇಶದಂತೆ ಶೈಕ್ಷಣಿಕ ಧನಸಹಾಯ ಪರಿಷ್ಕರಿಸಿ ಪಾವತಿಸಬೇಕು” ಎಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.
ಸಿಐಟಿಯು ಕೊಪ್ಪಳ ಜಿಲ್ಲಾಧ್ಯಕ್ಷ ಖಾಸೀಂ ಸರದಾರ್ ಮಾತನಾಡಿ, “ರಾಜ್ಯದಲ್ಲಿ 2007ರಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಮಿಕರಿಗಾಗಿ 19 ಸೌಲಭ್ಯಗಳನ್ನು ಘೋಷಿಸಿದೆ. ಇದರಲ್ಲಿ 11 ಸೌಲಭ್ಯಗಳು ಮಾತ್ರವೇ ಜಾರಿಯಲ್ಲಿವೆ. ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣ, ಆರೋಗ್ಯ, ಅಪಘಾತ, ಸಹಜ ಮರಣ, ಹೆರಿಗೆ ಮೊದಲಾದ ಸೌಲಭ್ಯಗಳು ಜಾರಿಯಲ್ಲಿವೆ. ಆದರೆ ಇತ್ತೀಚೆಗೆ ಕಲ್ಯಾಣ ಮಂಡಳಿಯು ಬೋಗಸ್ ಕಾರ್ಡ್ ನಿಯಂತ್ರಣಕ್ಕಾಗಿ ಹಲವು ಬಿಗಿ ಕ್ರಮಗಳನ್ನು ಅನುಸರಿಸುತ್ತಿರುವುದು ಸ್ವಾಗತಾರ್ಹ. ಆದರೆ ಬೋಗಸ್ ನಿಯಂತ್ರಣದ ನೆಪದಲ್ಲಿ ಸಾವಿರಾರು ಮಂದಿ ನೈಜ ಕಟ್ಟಡ ಕಾರ್ಮಿಕರು ಬಲಿಪಶುಗಳಾಗುತ್ತಿದ್ದಾರೆ” ಎಂದು ಹೇಳಿದರು.
“ನೋಂದಣಿ, ನವೀಕರಣ ಹಾಗೂ ವಿವಿಧ ಸೌಲಭ್ಯಗಳಿಗೆ ಅರ್ಜಿ ಹಾಕಲು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಮಂಡಳಿ ತಂತ್ರಾಂಶದಲ್ಲಿ ಪದೇಪದೆ ಉಂಟಾಗುತ್ತಿರುವುದರಿಂದ ಶೈಕ್ಷಣಿಕ ಧನಸಹಾಯ, ವೈದ್ಯಕೀಯ, ಹೆರಿಗೆ, ಪಿಂಚಣಿ ಮೊದಲಾದ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಸಲ್ಲಿಸಲಾದ ಸಾವಿರಾರು ಫಲಾನುಭವಿಗಳಿಗೆ ಸರಿಯಾಗಿ ಧನಸಹಾಯ ಪಾವತಿಯಾಗುತ್ತಿಲ್ಲ. ಶೈಕ್ಷಣಿಕ ಧನಸಹಾಯವನ್ನು ಶೇ.60 ರಿಂದ 80ರವರೆಗೆ ಕಡಿತ ಮಾಡಿರುವುದರಿಂದ ಸಾವಿರಾರು ಬಡ ಕಟ್ಟಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾಯ ಎದುರಾಗಿದೆ. ಇದೀಗ ಕಲ್ಯಾಣ ಮಂಡಳಿಯು ಶೈಕ್ಷಣಿ ಧನಸಹಾಯ ಪರಿಷ್ಕರಿಸಲು ಚಿಂತನೆ ನಡೆಸಿದ್ದರೂ ಆ ಕುರಿತು ಈವರೆಗೂ ಕ್ರಮವಹಿಸಿಲ್ಲ” ಎಂದರು
ಅಕ್ಷರ ದಾಸೋಹ ನೌಕರರ ರಾಜ್ಯಾಧ್ಯಕ್ಷೆ ಲಕ್ಷ್ಮೀದೇವಿ ಮಾತನಾಡಿ, “ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭವಾಗಿ 24 ವರ್ಷಗಳು ಕಳೆಯುತ್ತಿವೆ. ಲಕ್ಷಾಂತರ ಮಕ್ಕಳಿಗೆ ಹಾಲು ನೀಡಿ, ಶಾಲಾ ಸ್ವಚ್ಛತೆ ಮಾಡಿ, ಬಿಸಿ ಬಿಸಿ ಆಹಾರ ನೀಡಿ, ಶಾಲೆಯಲ್ಲಿ ನೀಡುವ ದಿನನಿತ್ಯದ ಎಲ್ಲ ಕೆಲಸ ಮಾಡಿ, ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ತಾಯ್ತತನದ ಪ್ರೀತಿ ನೀಡುವತ್ತ ಪರಿಶ್ರಮದ ಹೆಜ್ಜೆ ಹಾಕುತ್ತಿದ್ದಾರೆ. 1968ರಲ್ಲಿ ಮೊದಲ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಇದರ ಕರ್ತವ್ಯದ ಭಾಗವಾಗಿ ಬಿಸಿಯೂಟ ನೀಡುವ ಮೂಲಕ ಜಾರಿಯಲ್ಲಿದೆ. ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಿ, ಏಕಾಗ್ರತೆಯಿಂದ ಶಿಕ್ಷಣ ಪಡೆಯಲು, ಅರ್ಧದಲ್ಲಿ ಶಾಲೆಯನ್ನು ಬಿಡುವ ಕ್ರಮ ನಿಲ್ಲಿಸಲು ಮಧ್ಯಾಹ್ನದ ಉಪಾಹಾರ ಯೋಜನೆಯನ್ನು ಸಮಗ್ರವಾಗಿ ನಡೆಸಿಕೊಂಡು ಬಂದಿದೆ. ಈ ಯೋಜನೆ ದೇಶದ ಮಹತ್ವದ ಯೊಜನೆಯಾಗಿ ದೇಶದಾದ್ಯಂತ ಮುಂದುವರೆದಿದೆ” ಎಂದು ಹೇಳಿದರು.
“ಈ ಯೋಜನೆಯ ಮಹತ್ವವನ್ನು ಅರಿತು ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯದಲ್ಲಿ ಮಾನ್ಯ ಹೈಕೋರ್ಟ್ ತೀರ್ಮಾನಿಸಿದಂತೆ ವರ್ಷದ 12 ತಿಂಗಳು ಕೆಲಸ ಹಾಗೂ ಕನಿಷ್ಠಕೂಲಿ ನೀಡಲು ಜಾರಿಯಾಗಬೇಕು. ಬಿಸಿಯೂಟ ಯೋಜನೆ ಕೊಡಲಾದ ಸಾದಿಲ್ವಾರು ವೆಚ್ಚ, ಅಡುಗೆ ಗುಣಮಟ್ಟದ ವೆಚ್ಚವನ್ನು 2014ರಿಂದಲೂ ಹೆಚ್ಚಳ ಮಾಡಿಲ್ಲ. ಬದಲಿಗೆ ಅನುದಾನದಲ್ಲಿ ವರ್ಷದಿಂದ ವರ್ಷಕ್ಕೆ ಕಡಿತ ಮಾಡುತ್ತಿದೆ. ಮಾತ್ರವಲ್ಲದೇ ಈ ಯೋಜನೆಯ ಹೆಸರನ್ನು ಬದಲಾಯಿಸಿದೆ. ತನ್ನ ಪಾಲಿನ ನಿಧಿಯನ್ನು ಕಡಿತಗೊಳಿಸಿ ರಾಜ್ಯದ ಪಾಲನ್ನು ಕೊಡಬೇಕು ಎಂಬ ನೀತಿಯನ್ನು ಅನುಸರಿಸಿದ್ದರಿಂದ ಯೋಜನೆಯನ್ನು ಬಲಿಷ್ಠಪಡಿಸುವ ಜವಾಬ್ದಾರಿ ನನ್ನದಷ್ಟೇ ಅಲ್ಲವೆಂದು ಕೇಂದ್ರ ಸರ್ಕಾರ ಹೇಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ ಜುಲೈ ತಿಂಗಳಿನಲ್ಲಿ ನಿವೃತ್ತಿ ಹೊಂದಿದ ಬಿಸಿಯೂಟ ನೌಕರರಿಗೆ ಇಡಿಗಂಟು ಜಾರಿ ಮಾಡಲು ನಮ್ಮ ರಾಜ್ಯ ಸರ್ಕಾರದ ಹಣಕಾಸು ಇಲಾಖೆ ಸೇವೆಯ ಆಧಾರಿತವಾಗಿ ನೀಡಲು ಶಿಫಾರಸು ಮಾಡಿದೆ. ಆದರೆ ಈವರೆಗೆ ಜಾರಿಯಾಗಿಲ್ಲ. ಸರ್ಕಾರ ಕೂಡಲೇ ಇದರ ಜಾರಿಗೆ ಮುಂದಾಗಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಮಿತ್ ಶಾ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ
“ರಾಜ್ಯದಲ್ಲಿ ಬಿಸಿಯೂಟ ಯೋಜನೆಗಳನ್ನು ಬಲಹೀನಗೊಳಿಸಲು ಇಸ್ಕಾನ್ ಹಾಗೂ ಧರ್ಮಾಧಾರಿತ ಕೆಲ ಸಂಘ-ಸಂಸ್ಥೆಗಳಿಗೆ ಈ ಯೋಜನೆ ನೀಡಲು ಕೆಲ ಜಿಲ್ಲೆಗಳಲ್ಲಿ ಆಗಾಗ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಶಾಲೆಗಳಲ್ಲಿ ಕೆಲಸ ಮಾಡುವ ಬಿಸಿಯೂಟ ನೌಕರರು ಭೀತಿಯಲ್ಲಿಯೇ ಕೆಲಸ ಮಾಡಬೇಕೆಂಬ ಪರಿಸ್ಥಿತಿ ಇದ್ದೇ ಇದೆ. ಕೇಂದ್ರ ಸರ್ಕಾರವು ಇದಕ್ಕೆ ಬೇಕಾದಂತಹ ಹಣಕಾಸು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವು ಒತ್ತಡ ಹಾಕಬೇಕಿದೆ. ಈ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಮಾಡಿದರೆ ಮಾತ್ರವೇ ಈ ಯೋಜನೆಯನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುತ್ತದೆ” ಎಂದರು.