ಸದಾಶಿವ ಆಯೋಗದ ಒಳಮೀಸಲಾತಿ ಜಾರಿಗೊಳಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶ ಪಾಲಿಸದ ಸರ್ಕಾರ ದಲಿತರ ಪಾಲಿಗೆ ಸತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಾದಿಗ ದಂಡೋರ ಸಮಾಜ ರಾಜ್ಯಾಧ್ಯಕ್ಷ ಹುಸೇನ್‌ಸ್ವಾಮಿ ಡಿ ತಲೆಬೋಳಿಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ವಿಶಿಷ್ಟವಾಗಿ ಪ್ರತಿಭಟಿಸಿದರು.
ಮಾದಿಗ ದಂಡೋರ ಸಂಸ್ಥಾಪಕ ಬಿ ಹುಸೇನ್‌ಸ್ವಾಮಿ ಮಾತನಾಡಿ, “ಸದಾಶಿವ ಆಯೋಗವನ್ನು ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ದಿಕ್ಕರಿಸುತ್ತಿದೆ. ಒಳಮೀಸಲಾತಿಗಾಗಿ 30 ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದೇವೆ. ಚುನಾವಣೆಯ ನೆಪ ಹೇಳುತ್ತ ಒಳಮೀಸಲಾತಿ ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ. ಹಾಗಾಗಿ 70 ವರ್ಷವಾದರೂ ಕಾಂಗ್ರೆಸ್ ಸರ್ಕಾರ ನಮ್ಮ ದಲಿತರ ಪರವಾಗಿಲ್ಲ. ದಲಿತರ ಹೆಸರೇಳಿಕೊಂಡು ಈ ಸರ್ಕಾರ ಬದುಕುತ್ತಿದೆಯೇ ಹೊರತು ಶೋಷಣೆಗೊಳಗಾದವರ ಪರ ಇಲ್ಲ ದಲಿತರ ಪಾಲಿಗೆ ಸರ್ಕಾರ ಸತ್ತಿದೆ. ಅದಕ್ಕಾಗಿ ತಲೆಬೋಳಿಸಿಕೊಂಡು ಸರ್ಕಾರಕ್ಕೆ ಮುಡಿಕೊಟ್ಟೆರುವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೇಮರಾಜ ಬೀರಾಪುರ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಹಾಗೂ ಬಿಜೆಪಿ ಸರ್ಕಾರ ಮಾದಿಗ ಸಮುದಾಯಕ್ಕೆ ಸತತವಾಗಿ ವಂಚನೆ ಮಾಡುತ್ತ ಬಂದಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶವಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯಧೋರಣೆ ತಾಳಿದೆ. ಈ ಕೂಡಲೇ ಸಿಎಂ ಸಿದ್ಧರಾಮಯ್ಯನವರು ಒಳಮೀಸಲಾತಿ ಜಾರಿಗೊಳಿಸಬೇಕು ಇಲ್ಲದಿದ್ದರೆ ಬೆಂಗಳೂರು ಸಂವಿಧಾನ ಚಲೋ ಮೂಲಕ ಫ್ರೀಡಂ ಪಾರ್ಕ್‌ನಲ್ಲಿ ತೀವ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಮಾದಿಗ ದಂಡೋರ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶರಣಮ್ಮ ಮಾತನಾಡಿ, ” ಬಹಳ ವರ್ಷದ ಒಳಮೀಸಲಾತಿ ಬೇಡಿಕೆಯನ್ನು ಸರ್ಕಾರ ಈಡೇರಿಸಲೇಬೇಕು. ದೇವಸ್ಥಾನದಲ್ಲಿ ಬಿಟ್ಟುಕೊಳ್ಳದ ನಮಗೆ, ಕುಡಿಯುವುದಕ್ಕೆ ನೀರು ಎತ್ತರಿಸಿ ಹಾಕುವ ನಮ್ಮ ಸಮುದಾಯಕ್ಕೆ ಒಳಮೀಸಲಾತಿ ಅತ್ಯವಶ್ಯ. ತಳಸಮುದಾಯದ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸದಾಶಿವ ಆಯೋಗ ಜಾರಿಯಾಗಬೇಕು ಹಾಗೂ ಸುಪ್ರೀಂಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಬೇಕು” ಎಂದು ಒತ್ತಾಯಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ʼಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿʼ; ಕ್ರಾಂತಿಕಾರಿ ಪಾದಯಾತ್ರೆ
ಜಿಲ್ಲಾಧಿಕಾರಿಗಳು ಕಚೇರಿಯಲ್ಲಿಯೇ ಇದ್ದು ಮಾದಿಗ ದಂಡೋರದ ಬೇಡಿಕೆಯ ಮನವಿ ಪತ್ರ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿಯವರನ್ನು ಕಳುಹಿಸಿರುವುದಕ್ಕೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹುಸೇನ್‌ಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ, “ಜಿಲ್ಲಾಧಿಕಾರಿಗಳ ಕೋರ್ಟ್ ನಡೆದಿದೆ. ಹಾಗಾಗಿ ಅವರ ಪರವಾಗಿ ನನ್ನನ್ನು ಕಳಿಸಿದ್ದಾರೆ ನಿಮ್ಮ ಮನವಿಯನ್ನು ಮೇಲಾಧಿಕಾರಿಗಳಿಗೆ ತುಲುಪಿಸು ರಾಜ್ಯ ಸರ್ಕಾರಕ್ಕೆ ಹಾಗೂ ರಾಜ್ಯಪಾಲರಿಗೆ ತಲುಪಿಸುತ್ತೇವೆ” ಎಂದು ಹೇಳಿದ ಬಳಿಕ ಮನವಿ ನೀಡಿದರು.