ಕಳೆದ 25 ವರ್ಷಗಳಿಂದ ಸರ್ಕಾರ ನೀಡಿರುವ ಜಾಗದಲ್ಲಿ ವಾಸಿಸುತ್ತಿರುವ ಹುಳ್ಕಿಹಾಳ ಕ್ಯಾಂಪಿನ 250ಕ್ಕೂ ಅಧಿಕ ಕುಟುಂಬಗಳು ಹಕ್ಕುಪತ್ರಕ್ಕೆ ಆಗ್ರಹಿಸಿ ಕಾರಟಗಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಊರಿನ ಪ್ರಮುಖ ಸಂಗಪ್ಪ ದಳಪತಿ ಮಾತನಾಡಿ, “ಎರಡು ದಶಕಗಳಿಂದ ಹಕ್ಕುಪತ್ರಗಳನ್ನು ಪಡೆಯಲು ಜನರು ಪ್ರತಿದಿನ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈವರೆಗೆ ಹಕ್ಕುಪತ್ರಗಳೂ ದೊರೆತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಹುಳ್ಕಿಹಾಳ ಕ್ಯಾಂಪಿನ ಕಾಲುವೆ ಪಕ್ಕದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದ ಜನರಿಗೆ ಆಗಿನ ಸರ್ಕಾರ ಹಾಗೂ ಮಾಜಿ ಮಂತ್ರಿ ಮಲ್ಲಿಕಾರ್ಜುನ ನಾಗಪ್ಪನವರ ಪರಿಶ್ರಮದಿಂದ ಸರ್ವೇ ನಂ 72/1 ರಲ್ಲಿ 9 ಎಕರೆ ಜಮೀನು ಖರೀದಿಸಿ ನೀವೇಶನಗಳನ್ನು ಹಂಚಿಕೆ ಮಾಡಿದ್ದರು. ಈ ಹಂಚಿಕೆ ಮಾಡಿ 25 ವರ್ಷಗಳು ಕಳೆದಿದ್ದರೂ ಕೂಡ ಇಲ್ಲಿನ ನಿವಾಸಿಗಳು ಹಕ್ಕುಪತ್ರಕ್ಕಾಗಿ ಹಪಹಪಿಸುವಂತಾಗಿದೆ” ಎಂದರು.
“ನಮ್ಮ ನಿವೇಶನಗಳಿಗೆ ಹಕ್ಕುಪತ್ರಗಳು ಇಲ್ಲದಿರುವುದರಿಂದ ಸಾಲ ಪಡೆಯುವುದು, ಪರಭಾರೆ ಮಾಡುವುದು, ಖರೀದಿ ಪ್ರಕ್ರಿಯೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ. ಒಟ್ಟಿನಲ್ಲಿ ಎರಡು ದಶಕಗಳು ಕಳೆದರೂ ಹಕ್ಕುಪತ್ರಗಳಿಗಾಗಿ ಹರಸಾಹಸ ಪಡುವ ಸ್ಥಿತಿ ಕ್ಯಾಂಪಿನ ನಿವಾಸಿಗಳದ್ದಾಗಿದೆ. ಆದ್ದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಕ್ಕುಪತ್ರಗಳನ್ನು ವಿತರಿಸಬೇಕು” ಎಂದು ಒತ್ತಾಯಿಸಿದರು.
“ಸರ್ಕಾರವು ಇತ್ತೀಚೆಗೆ ಈ ಕ್ಯಾಂಪನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸುವ ವಿಷಯವೂ ಇಲ್ಲಿನ ನಿವಾಸಿಗಳಿಗೆ ತಿಳಿದಿಲ್ಲ. ಯಾವುದೇ ಮಾಹಿತಿ ಇರುವುದಿಲ್ಲ. ಕನಿಷ್ಠ ಪಕ್ಷ ಈ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳು ಪ್ರಚಾರ ಪಡಿಸುವ ಗೋಜಿಗೂ ಹೋಗಿಲ್ಲ. ತಾವು ಮನೆ ಕಟ್ಟಿಕೊಂಡು ವಾಸಿಸುತ್ತಿರುವುದು ನಮ್ಮದೇ ಸ್ವಂತ ನಿವೇಶನದಲ್ಲಿ ಕಟ್ಟಿಕೊಂಡ ಮನೆಗಳಾ ಅಥವಾ ಬೇರೆ ಯಾರದೋ ನಿವೇಶನದಲ್ಲಿ ಕಟ್ಟಿಕೊಂಡ ಮನೆಗಳಾ ಎಂಬ ಸಂಶಯ ಅವರಿಗೆ ಕಾಡುತ್ತಿದೆ. ಇದರಿಂದಾಗಿ ನಿವಾಸಿಗಳು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ” ಎಂದರು.
“ಒಟ್ಟಿನಲ್ಲಿ ಕಂದಾಯ ಗ್ರಾಮವನ್ನಾಗಿ ಪರಿವರ್ತನೆ ಮಾಡುವ ಮುನ್ನವೇ ತಮ್ಮ ನಿವೇಷನಗಳಿಗೆ ಹಕ್ಕುಪತ್ರಗಳನ್ನು ನೀಡಬೇಕು. ಇಲ್ಲದಿದ್ದರೆ ತಹಶೀಲ್ದಾರ್ ಕಚೇರಿಯ ಮುಂದೆ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಗ್ರಾಮಸ್ಥರ ಪರವಾಗಿ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಮುಳುಗುತ್ತಿರುವ ಹಡಗಿನಂತಾಗಿದೆ: ಸಚಿವ ಎಂ ಬಿ ಪಾಟಿಲ್
ಈ ವೇಳೆ ನಿವಾಸಿಗಳಾದ ಕೇಶವ ಗಂಗಾವತಿ, ಬಾಳಪ್ಪ, ಹನುಮಂತಪ್ಪ ತಳುಗೇರಿ, ಬಸಪ್ಪ ಬಿಂಜವಾಡಗಿ, ಶಿವಪುತ್ರಪ್ಪ, ಮುತ್ತಪ್ಪ, ಬಸಲಿಂಗಪ್ಪ, ಲಕ್ಷ್ಮಣ, ಹನುಮಂತ ಗ್ವಾದಿ, ಶಿವರಾಜಕುಮಾರ, ಮಂಜುನಾಥ, ಪಾಂಡುರಂಗ, ಶರಣಪ್ಪ ಅಣ್ಣಿಗೇರಿ, ಶರಣಪ್ಪ ಸುಂಕದ, ನಾಗರಾಜ ಭೋವಿ ಸೇರಿದಂತೆ ಇತರರು ಇದ್ದರು.