ಕೊಪ್ಪಳ ನಗರ ಬೇಲ್ದಾರ ಕಾಲೋನಿಯ ಸರಕಾರಿ ಪ್ರಾಥಮಿಕ ಶಾಲೆಯ ಬಿಸಿಯೂಟ ಕೇಂದ್ರ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. 3-4 ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಟ್ಟಡ ಸೋರುತ್ತಿದೆ. ಯಾವಾಗ ಕುಸಿಯುತ್ತದೋ ಎಂಬ ಅಪಾಯ ಇದ್ದರೂ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ದಾರಿ ಇಲ್ಲದೆ ಸೋರುತ್ತಿರುವ ಕಟ್ಟಡದಲ್ಲೇ ಸಿಬ್ಬಂದಿ ಅಡುಗೆ ಮಾಡಿದ್ದಾರೆ. ನೀರಿನಲ್ಲಿ ಪಾತ್ರೆ- ಪಗಡೆಗಳು ತೇಲಾಡುತ್ತಿರುವ ದೃಶ್ಯ ಕಂಡುಬಂದಿದ್ದು, ಪೋಷಕರು ಆತಂಕದಲ್ಲಿದ್ದಾರೆ.

ಶಾಲಾ ಮುಖ್ಯೋಪಾಧ್ಯಾಯರು ಈ ಸಂಬಂಧ ಬಿಇಒ ಮತ್ತು ಅಕ್ಷರ ದಾಸೋಹ ಬಿಸಿಯೂಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಇದುವರೆಗೂ ಯಾರೂ ಕ್ರಮ ಕೈಗೊಂಡಿರುವುದಿಲ್ಲ. ಈ ಎಲ್ಲಾ ಸಮಸ್ಯಗಳಿಂದಾಗಿ ಬಿಸಿಯೂಟ ಸಿಬ್ಬಂದಿಗಳು ಭಯದ ವಾತಾವರಣದಲ್ಲಿ ಕೆಲಸವನ್ನು ಮಾಡಬೇಕಾಗಿದೆ.
ಸಾಮಾಜಿಕ ಹೋರಾಟಗಾರ ಬಸವರಾಜ್ ಶೀಲವಂತರ ಮಾತನಾಡಿ, “ಬಿಸಿಯೂಟದ ಅಡುಗೆ ಕೊಠಡಿಯು ದುರಸ್ತಿಯಲ್ಲಿದ್ದು, ಅಧಿಕಾರಿಗಳು ಈ ಕುರಿತಂತೆ ಬೇಗ ಕ್ರಮ ಕೈಗೊಳ್ಳದಿದ್ದರೆ ಮುಂದೊಂದು ದಿನ ಅಪಾಯ ಸಂಭವಿಸಿದರೂ ಆಶ್ಚರ್ಯವಿಲ್ಲ. ಅನಾಹುತಕ್ಕೆ ಅವಕಾಶವನ್ನು ಮಾಡಿಕೊಡದೆ ಅಧಿಕಾರಿಗಳು ಬೇಗ ಎಚ್ಚೆತ್ತುಕೊಂಡರೆ ಒಳಿತು” ಎಂದು ಎಚ್ಚರಿಸಿದರು.

ಇದನ್ನೂ ಓದಿ: ಕೊಪ್ಪಳ | ಐತಿಹಾಸಿಕ ಸಾಧನೆಗೆ ಶಕ್ತಿ ಯೋಜನೆ ಸಾಕ್ಷಿ: ಶಾಸಕ ರಾಘವೇಂದ್ರ ಹಿಟ್ನಾಳ
“ಕೊಠಡಿ ಬಹುತೇಕ ಕಡೆಗಳಲ್ಲಿ ಬಿರುಕು ಬಿಟ್ಟಿದ್ದು, ಕೊಠಡಿ ಬಹುತೇಕ ಹಾಳಾಗಿದ್ದು, ಕಟ್ಟಡದ ಒಳಭಾಗ ನಿರಿನಿಂದ ತುಂಬಿಕೊಂಡಿದೆ. ಕೊಠಡಿಯಲ್ಲೆಲ್ಲ ಯಾವತ್ತು ಬಿದ್ದು ಅಪಾಯ ತಮಡೋತ್ತದೋ ಎಂಬ ಆತಂಕ ವಿದ್ಯಾರ್ಥಿಗಳ ಪಾಲಕರಲ್ಲಿ ಆವರಿಸಿದೆ. ಕಟ್ಟಡಕ್ಕೆ ಅಳವಡಿಸಿರುವ ವಿದ್ಯುತ್ ವೈರ್ ಕಿತ್ತು ಹೊರಗೆ ಬಂದಿವೆ. ಇದು ಇನ್ನೊಂದು ರೀತಿಯ ಅಪಾಯದ ಗುರುತಾಗಿದೆ. ಮಾಳಿಗೆಯ ಚತ್ತು ಉದುರಿ ಬೀಳುತ್ತಿದೆ. ಇದರಿಂದ ಯಾವಾಗ ಯಾವ ರೀತಿಯ ಅಪಾಯ ಕಾದಿದೆಯೋ ಹೇಳಲಾಗದು. ಅಪಾಯ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಬೇಕು” ಎಂದು ಬಿಸಿಯೂಟ ಅಧಿಕಾರಿ ಮಲ್ಲಿಕಾರ್ಜುನ ಗೌಡರವರಿಗೆ ಒತ್ತಾಯಿಸಿರದರು.