ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ನಡುವಲಕೊಪ್ಪದಲ್ಲಿ ಮನರೇಗಾ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ನಡೆಯಿತು.
ಕುಷ್ಟಗಿಯ ಜನಜಾಗೃತಿ ಕಲಾರಂಗ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 2023-24ನೇ ಸಾಲಿನ ಸಂಘ-ಸಂಸ್ಥೆಗಳ ಧನಸಹಾಯ ಯೋಜನೆಯಡಿಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಬಾಬುನಾಯಕ ಮೇಟಿ ಅವರು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು.
“ನಾವು ದಿನ ನಿತ್ಯದ ಬದುಕಿನಲ್ಲಿ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಇಲ್ಲದೇ ಪರದಾಡುತ್ತೇವೆ. ಇಂತಹ ಸಂಸ್ಥೆಗಳು ಕಲಾತಂಡದ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯವಾಗಿದೆ. ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಬಾಬುನಾಯಕ ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೀರಯ್ಯ ಹಿರೇಮಠ ಅವರಿಂದ ಜಾಗೃತಿ ಗೀತೆ, ಬನ್ನಿಗೋಳ ಶರಣಪ್ಪ ಅವರಿಂದ ಬಯಲಾಟದ ಪದ, ದೇವೇಂದ್ರಪ್ಪ ಕಮ್ಮಾರ ಅವರಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು. ಶಿವಲಿಂಗಪ್ಪ ಪೂಜಾರ ಸಂಗಡಿಗರಿಂದ ‘ಕೂಲಿಯ ಬಿಡಿಸಿ ಶಾಲೆಗೆ ಕಳಿಸಿ’ ಶೈಕ್ಷಣಿಕ ಜಾಗೃತಿ ಮೂಡಿಸುವ ಬೀದಿನಾಟಕ ಪ್ರದರ್ಶನ ನಡೆಯಿತು.
ಇದನ್ನೂ ಓದಿ: ಕೊಪ್ಪಳ | ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ; ಇಬ್ಬರ ಬಂಧನ
ಕಾರ್ಯಕ್ರಮದಲ್ಲಿ ನರಸಪ್ಪ ನಾಯಕ, ದೊಡ್ಡಮ್ಮ ನಾಯಕ, ಮೌನೇಶ ನಾಯಕ, ರಾಚಪ್ಪ ಬಡಿಗೇರ, ಹನಮಪ್ಪ ನಾಯಕ, ರೂಪಲೆಪ್ಪ ನಾಯಕ ಸೇರಿದಂತೆ ಮನರೇಗಾ ಕಾರ್ಮಿಕರು, ಕೇಸೂರು ಗ್ರಾಮ ಪಂಚಾಯತಿ ಸಿಬ್ಬಂದಿ ಮಾಸಪ್ಪ ಹಾಗೂ ಇತರರಿದ್ದರು.