ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ಸೇರಿದಂತೆ ಹೊಸ ಉಕ್ಕಿನ ಕಾರ್ಖಾನೆ ಸ್ಥಾಪನೆ ಹಾಗೂ ಅಣುವಿದ್ಯುತ್ ಸ್ಥಾವರ ಯೋಜನೆಯ ಪ್ರಸ್ತಾಪವನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟ ಮುಂದುವರೆದಿದ್ದು, ಹೋರಾಟದ ಭಾಗವಾಗಿ ಎರಡು ದಿನಗಳ ಪರಿಸರ ಜಾಗೃತಿ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಎಐಡಿವೈಒ ತಿಳಿಸಿದೆ.
ಈ ಕುರಿತು ಸಂಘಟನೆಯ ಜಿಲ್ಲಾ ಸಂಚಾಲಕ ಶರಣು ಪಾಟೀಲ್ ಮಾತನಾಡಿ, “ಹುತಾತ್ಮ ಭಗತ್ ಸಿಂಗ್, ರಾಜಗುರು, ಸುಖದೇವ್‌ರನ್ನು ಗಲ್ಲಿಗೇರಿಸಿದ ದಿನದಂದು ಶಿಬಿರ ಹಮ್ಮಿಕೊಳ್ಳಲಾಗಿದೆ. ಇದು ಜಿಲ್ಲೆಗೆ ಭೂತದಂತೆ ವಕ್ಕರಿಸಿರುತ್ತಿರುವ ಬೃಹತ್ ಕಾರ್ಖಾನೆಗಳನ್ನು ತೊಲಗಿಸುವ ಹೋರಾಟಕ್ಕೆ ಸ್ಫೂರ್ತಿಯಾಗಲಿದೆ. ಅನ್ಯಾಯದ ವಿರುದ್ಧ ಹೋರಾಟ ಮುಂದುವರೆಸುತ್ತೇವೆ” ಎಂದರು.
ಶರಣು ಗಡ್ಡಿ ಮಾತನಾಡಿ, “ಹೇಳುವವರು ಎಷ್ಟೇ ಮಹಾನ್ ವ್ಯಕ್ತಿಗಳಾಗಿರಲಿ ಅವರ ಮಾತುಗಳನ್ನು ವಿಮರ್ಶಿಸದೇ ಒಪ್ಪದಿರಿ ಎನ್ನುವ ಭಗತ್ ಸಿಂಗ್ ಮಾತಿನಂತೆ, ಯಾವುದೇ ವಿಷಯನ್ನು ವಿಚಾರ ಮಾಡದೇ ಒಪ್ಪಿಕೊಳ್ಳಬಾರದು. ಸತ್ಯ ಮತ್ತು ಸಾಮಾನ್ಯ ಜನರ ಹಿತಕ್ಕೆ ಧಕ್ಕೆ ಮಾಡುವವರ ವಿರುದ್ಧ ಹೋರಾಟ ಮಾಡಲು ಎಲ್ಲಾ ರೀತಿಯಿಂದಲೂ ಸನ್ನದ್ದರಾಗಬೇಕಾಗುತ್ತದೆ” ಎಂದರು.
“ವೈಚಾರಿಕವಾಗಿ, ಸಂಘಟನಾತ್ಮಕವಾಗಿ, ರಾಜಕೀಯವಾಗಿ ಎರಡು ದಿನದ ಶಿಬಿರದಲ್ಲಿ ಅನೇಕ ವಿಷಯ ತಜ್ಞರು, ಪರಿಸರವಾದಿಗಳು, ಚಿಂತಕರು, ಹೋರಾಟಗಾರರು, ಕಾರ್ಖಾನೆ, ಉದ್ಯೋಗ, ಅಭಿವೃದ್ಧಿ, ಕೃಷಿ, ಪರಿಸರ ಮಾಲಿನ್ಯ, ಜನಹೋರಾಟಗಳು, ಕಲ್ಯಾಣ ಕರ್ಣಾಟಕದ ಅಭಿವೃದ್ಧಿ ಕುರಿತು ಚರ್ಚಿಸಲಾಗುತ್ತದೆ. ಪ್ರತಿಯೊಬ್ಬರೂ ಈ ಶಿಬಿರದಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕೊಪ್ಪಳ | ಕರ್ತವ್ಯ ಲೋಪ ಆರೋಪ : ಆನೆಗೊಂದಿ ಗ್ರಾ.ಪಂ. ಪಿಡಿಒ ಅಮಾನತು
ಶಿಬಿರದಲ್ಲಿ ಹೋರಾಟಗಾರರಾದ ಎಸ್ ಆರ್ ಹಿರೇಮಠ್, ವಿ ಎನ್ ರಾಜಶೇಖರ್, ಬಸವರಾಜ್ ಸೂಳಿಭಾವಿ, ಕೃಷಿ ವಿಜ್ಞಾನಿ ರಾಜೇಂದ್ರ ಪೋತದಾರ್, ಖ್ಯಾತ ಲೇಖಕ ಶಿವಸುಂದರ್, ಕೊಪ್ಪಳ ಜಿಲ್ಲಾ ಬಚಾವೋ ಸಮಿತಿಯ ನಾಯಕ ಅಲ್ಲಮಪ್ರಭು ಬೆಟ್ಟದೂರು ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.