ಕೊಪ್ಪಳ ತಾಲೂಕಿನ ಗಿಣಿಗೇರಿ ಗ್ರಾಮದಲ್ಲಿ ಕೈಗಾರಿಕೆಗಳಿಂದ ಈಗಾಗಲೇ ಪರಿಸರ ಮಾಲಿನ್ಯವಾಗುತ್ತಿದೆ. ಇದರ ಜತೆಗೆ ಕಲ್ಯಾಣಿ ಸ್ಟೀಲ್ ಕಂಪನಿಯು ಗ್ರಾಮದ ಪಕ್ಕದಲ್ಲಿ ಕರಿ ಬೂದಿಯನ್ನು ಟಿಪ್ಪರ್‌ಲ್ಲಿ ತಂದು ಗುಡ್ಡದ ರೀತಿಯಲ್ಲಿ ಡಂಪ್ ಮಾಡಿ ಪರಿಸರ ಮಾಲಿನ್ಯ ಮಾಡುತ್ತಿದೆ ಎಂದು ಗಿಣಿಗೇರಾ ನಾಗರಿಕ ಹೋರಾಟ ಸಮಿತಿ ಆರೋಪಿಸಿದೆ.
“ಗ್ರಾಮದಿಂದ ಕೇವಲ 30 ಮೀಟರ್ ಅಂತರದಲ್ಲಿ ಕೈಗಾರಿಕಾ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಈ ಪ್ರದೇಶದಿಂದ ಬರುವ ವಿಷಕಾರಿ ಕರಿಬೂದಿ ಊರನ್ನೆಲ್ಲಾ ಆವರಿಸಿಕೊಂಡು ಜನಸಾಮಾನ್ಯರ ಜೀವನ ದುಸ್ತರವಾಗಿದೆ. ಕಂಪನಿಯವರು ಸಾರ್ವಜನಿಕರಿಗೆ ಹಾಗೂ ಗ್ರಾಮಕ್ಕಾಗುವ ತೊಂದರೆ ಬಗ್ಗೆ ಕಿಂಚಿತ್ತೂ ಯೋಚನೆ ಮಾಡುತ್ತಿಲ್ಲ. ಅಡುಗೆ ಮನೆಯಿಂದ ಹಿಡಿದು ಊಟ ಮಾಡುವ ತಾಟಿನವರೆಗೂ ದೂಳು ಆವರಿಸುತ್ತಿದೆ. ಅಧಿಕಾರಿಗಳೂ ಇತ್ತ ಗಮನಹರಿಸುತ್ತಿಲ್ಲ” ಎಂದು ಸಮಿತಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನದ ಪೂಜಾರ ಮಾತನಾಡಿ, “ಮಕ್ಕಳು, ವೃದ್ಧರು, ಜನಸಾಮಾನ್ಯರು ಅಸ್ತಮಾ, ಟಿವಿ, ಕ್ಯಾನ್ಸರ್, ಮುಂತಾದ ಮಾರಣಾಂತಿಕ ರೋಗಗಳಿಗೆ ತುತ್ತಾಗಿ ಆಸ್ಪತ್ರೆ ಸೇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಮೌಖಿಕವಾಗಿ ಹಾಗೂ ಮನವಿಗಳ ಮುಖಾಂತರ ಹೇಳುತ್ತಿದ್ದರೂ ಕ್ರಮವಹಿಸಿಲ್ಲ. ಇದು ಮುಂದುವರೆದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಹಾಗೂ ಕಾರ್ಖಾನೆ ವಿರುದ್ಧ ಉಗ್ರ ಹೋರಾಟ ಮಾಡಬೇಕಾತ್ತದೆ” ಎಂದರು.
ಇದನ್ನೂ ಓದಿ: ಕೊಪ್ಪಳ | ಕಚೇರಿ ವೇಳೆ ಬದಲಾದರೂ ಬದಲಾಗದ ನೌಕರರು
ಮಂಗಳೇಶ ರಾಠೊಡ್, ಶರಣು ಗಡ್ಡಿ, ಹನಮಂತ ಕಟಿಗಿ, ಅನುರಾಧ ಕೂಡ್ಲಿಗಿ, ಮಹೇಶ ಮಸ್ತಿ, ಮರಿಯಪ್ಪ, ದುರ್ಗೇಶ, ಯಮನೂರು, ಮೆಹದಬೂಬ್ ಸಾಹೇಬ್ ಹಾಗೂ ಇತರರಿದ್ದರು.