ರೈತರ ಸಾಲ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ವಕ್ಫ್‌ನಿಂದ ರೈತರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಸೇರಿ ನಾನಾ ವಿವಿಧ ರೈತರ ಬೇಡಿಕೆಯನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವಾಲ್ಮೀಕಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.
ಆಡಳಿತ ಮತ್ತು ವಿರೋಧ ಪಕ್ಷಗಳು ರೈತರ, ಕಾರ್ಮಿಕರ, ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿಯನ್ನು ಮರೆತು ಪರಸ್ಪರ ಒಬ್ಬರ ಮೇಲೊಬ್ಬರು ಆರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಅತಿವೃಷ್ಟಿ ಅನಾವೃಷ್ಟಿ ಬೆಳೆ ನಷ್ಟಕ್ಕೆ ಸಮವಾಗಿ ಪರಿಹಾರ ಕೊಡದ ಕಾರಣ ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನ ಸಹ ಕೊಡದೆ ದುಡಿಸಿಕೊಳ್ಳುತ್ತಿರುವುದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ದೂರಿದರು.

ರೈತ ಬೆಳೆದ ಎಲ್ಲ ಬೆಳೆಗಳಿಗೆ ತಕ್ಷಣವೇ ಖರೀದಿ ಕೇಂದ್ರವನ್ನು ತೆರೆದು ಖರೀದಿಸಬೇಕು, ರೈತರ ಬೆಳೆಯನ್ನು ಹಾಳು ಮಾಡುತ್ತಿರುವ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಬೇಕು. ಇದರಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಪರಿಹಾರ ನೀಡಬೇಕು ಎಂದರು.
ರೈತರ ಬೇಡಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ನವೆಂಬರ್ 26ರಂದು ದೇಶದ 500 ಜಿಲ್ಲೆಗಳಲ್ಲಿ ಎಚ್ಚರಿಕೆ ರ್‍ಯಾಲಿ ನಡೆಸಲು ತೀರ್ಮಾನಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ,ದುಡಿಯುವ ಜನರು ,ಮಹಿಳೆಯರು ಸೇರಬೇಕು ಎಂದು ಇದೇ ವೇಳೆ ಕರೆ ನೀಡಿದರು.
ಇದನ್ನು ಓದಿದ್ದೀರಾ? ಮಂಡ್ಯ | ಸೀಟ್ ಬೆಲ್ಟ್ ಧರಿಸದ ಚಾಲಕನಿಗೆ ₹18 ಸಾವಿರ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು!
ಈ ವೇಳೆ ರಾಜ್ಯ ಮುಖಂಡ ನಜೀರ್ ಸಾಬ್ ಮೂಲಿಮನಿ, ಕನಕಗಿರಿ ತಾಲೂಕು ಅಧ್ಯಕ್ಷ ಗಣೇಶ್ ಇಳಿಗೇರ್, ಡಿ ಎಚ್ ಪೂಜಾರ , ಕರಿಯಪ್ಪ ಗುಡಿಮನಿ, ದುರುಗೇಶ್ ಬರಗೂರು ಇನ್ನಿತರರು ಹಾಜರಿದ್ದರು.
