ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ದಲಿತ ಯುವತಿಯನ್ನು, ಯುವಕನ ಮನೆಯವರು ಮನಬಂದಂತೆ ಹಲ್ಲೆ ನಡೆಸಿ, ಬಳಿಕ ವಿಷ ಹಾಕಿ ಕೊಲೆಗೈದಿರುವುದಾಗಿ ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ನಡೆದಿದ್ದು, ಮಾದಿಗ ಸಮುದಾಯಕ್ಕೆ ಸೇರಿದ ಮರಿಯಮ್ಮ(21) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.
ಮರಿಯಮ್ಮ ಹಾಗೂ ಹನುಮಯ್ಯ ಇಬ್ಬರು ಪರಸ್ಪರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮರಿಯಮ್ಮ ಮೂಲತ ಅಗೋಲಿ ಗ್ರಾಮದವರು. ವಿಠಲಾಪುರ ಗ್ರಾಮದಲ್ಲಿ ಅಜ್ಜಿ ಮನೆ ಇರುವುದರಿಂದ ಅವಾಗವಾಗ ಮನೆಗೆ ಬಂದು ಹೋಗುತ್ತಿದ್ದಳು. ಈ ವೇಳೆ ಗ್ರಾಮದ ಯುವಕ ಹನುಮಯ್ಯ ಪರಿಚಯವಾಗಿತ್ತು.ಈ ಪರಿಚಯ ಪ್ರೀತಿಗೆ ತಿರುಗಿತ್ತು.

ಹನುಮಯ್ಯ ಎಸ್ ಟಿ ಸಮುದಾಯಕ್ಕೆ ಸೇರಿದ ಯುವಕ. ಅಂತರ್ಜಾತಿಯ ಕಾರಣದಿಂದಾಗಿ ಮರಿಯಮ್ಮ ಹಾಗೂ ಹನುಮಯ್ಯ 2023ರ ಏಪ್ರಿಲ್‌ನಲ್ಲಿ ತಮ್ಮ ಕುಟುಂಬದವರನ್ನು ಒಪ್ಪಿಸಿ, ಬಳಿಕ ಗಂಗಾವತಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ಮದುವೆಯಾದ ನಂತರ ಯುವಕನ ಮನೆಯಲ್ಲಿ ಜಾತಿ ಸಂಬಂಧ ಯುವತಿಗೆ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ, ವರದಕ್ಷಿಣೆ ತರುವಂತೆ ಕೂಡ ಪೀಡಿಸುತ್ತಿದ್ದರು ಎಂಬ ಆರೋಪ ಕೂಡ ಕೇಳಿಬಂದಿದೆ.
ಯುವತಿ ಮಾದಿಗ ಸಮುದಾಯಕ್ಕೆ ಸೇರಿದವಳೆಂಬ ಎಂಬ ಕಾರಣಕ್ಕೆ ಮನೆಯ ಸಮೀಪವೇ ಬೇರೆಯೇ ಶೆಡ್ ಹಾಕಿ ಅಡುಗೆ ಮಾಡುವಂತೆ ಸೂಚಿಸಿದ್ದಲ್ಲದೇ, ನಾವು ಯಾರೂ ನೀನು ಮಾಡಿದ ಅಡುಗೆ ತಿನ್ನಲಾರೆವು ಎಂದು ಅಸ್ಪೃಶ್ಯತೆ ಆಚರಣೆ ಮಾಡಿರುವುದಾಗಿ ತಿಳಿದು ಬಂದಿದೆ. ಅಲ್ಲದೇ, ಎಲ್ಲದಕ್ಕೂ ಜಾತಿಯ ಕಾರಣವೊಡ್ಡಿ ಕುಟುಂಬದಿಂದ ದೂರವಿಟ್ಟು, ಹಿಂಸೆ ನೀಡುತ್ತಿದ್ದರು ಎಂದು ಯುವತಿ ಮರಿಯಮ್ಮ ತಮ್ಮ ಕುಟುಂಬಕ್ಕೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.
ಈ ನಡುವೆ ಯುವತಿಗೆ ಯುವಕನ ಕುಟುಂಬದ ಮಂದಿ ಬರ್ಬರವಾಗಿ ಹಲ್ಲೆ ನಡೆಸಿದ್ದು, ಈ ವೇಳೆ ಯುವತಿಯ ಸಾವಾಗಿದೆ. ಕೊಲೆ ಮಾಡಿದ ಬಳಿಕ ಯಾವುದೇ ಅನುಮಾನ ಬಾರದಿರಲು ವಿಷವುಣಿಸಿದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.
ಆ ಬಳಿಕ ಯುವಕನ ಕುಟುಂಬದವರು ಯುವತಿಯ ಕುಟುಂಬಕ್ಕೆ ಕರೆ ಮಾಡಿ, ‘ನಿಮ್ಮ ಮಗಳು ಜಮೀನಿನಲ್ಲಿ ವಿಷ ಕುಡಿದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಅಲ್ಲಿ ಆಕೆಯ ಸಾವಾಗಿದೆ’ ಎಂದು ತಿಳಿಸಿರುವುದಾಗಿ ಯುವತಿಯ ತಂದೆ ಗಂಗಾವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ವಿಷಯ ತಿಳಿದ ನಂತರ ವಿಠಲಾಪುರ ಗ್ರಾಮಕ್ಕೆ ಗಂಗಾವತಿ ಪೊಲೀಸರು ಭೇಟಿ ನೀಡಿದ್ದು, ಯುವತಿಯ ಮರಣೋತ್ತರ ಪರೀಕ್ಷೆ ನಡೆಸಲು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೇ, ಈ ಸಂಬಂಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಯುವತಿಯ ತಂದೆ ಗಾಳೆಪ್ಪ, ಯುವಕನ ಕುಟುಂಬದ 13 ಮಂದಿಯ ಮೇಲೆ ಕೊಲೆ ಆರೋಪ ಹೊರಿಸಿದ್ದರಿಂದ ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
.
