ಸರ್ಕಾರ ಪ್ರತಿಭಾವಂತ ಯುವಪ್ರತಿಭೆಗಳಿಗೆ ವೇದಿಕೆ ಒದಗಿಸಿ ನಾಡಿನೆಲ್ಲೆಡೆ ಪಸರಿಸುವ, ಸಂಗೀತ, ನೃತ್ಯ ಪರಂಪರೆಯನ್ನು ಬೆಳೆಸುವ ದೃಷ್ಟಿಯಿಂದ ಕರ್ನಾಟಕದಾದ್ಯಂತ ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಹಾಗೂ ಮುನ್ನಡೆಸಬೇಕು ಎಂದು ಸಂಗೀತ ಆಕಾಡೆಮಿ ರೆಜಿಸ್ಟ್ರಾರ್ ಎನ್ ನರೇಂದ್ರಬಾಬು ಹೇಳಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನಗರದ ಐಎಂಎ ಹಾಲ್‌ನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಆಯೋಜಿಸಲಾಗಿದ್ದ ಸಂಗೀತ ನೃತ್ಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಕಲ್ಯಾಣ ಕರ್ನಾಟಕ ಯುವಪ್ರತಿಭೆಗಳಲ್ಲಿ ಹೊಸ ಹೊಸ ಪ್ರತಿಭೆಗಳಿವೆ. ಅದನ್ನು ಹೊರತರುವುದಕ್ಕೆ ಕಾರ್ಯಕ್ರಮಗಳ ಅವಕಾಶ ಸಿಗುತ್ತಿಲ್ಲ. ತಾಲೂಕಿನಲ್ಲಿ ಇದು ಮೊದಲ ಕಾರ್ಯಕ್ರಮ. ನಿಜಕ್ಕೂ ಸ್ಮರಣೀಯ, ಇಂತಹ ಅದ್ಭುತವಾದ ಪ್ರತಿಭೆಗಳನ್ನು ಇಲ್ಲಿ ನೋಡಿ ತುಂಬಾ ಖುಷಿಯಾಯಿತು. ಈ ಪ್ರತಿಭೆಗಳು ಮುಂದಿನ ದಿನಗಳಲ್ಲಿ ಅಕಾಡೆಮಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬಹುದು” ಎಂದು ಹೇಳಿದರು.
ಅಕಾಡೆಮಿ ಸದಸ್ಯ ಮತ್ತು ಯುವಸಂಭ್ರಮದ ಸಂಚಾಲಕ ರಮೇಶ ಗಬ್ಬೂರ್ ಮಾತನಾಡಿ, “ವೇದಿಕೆಯಲ್ಲಿ ನೂರಾರು ಮಕ್ಕಳು ಸಂಗೀತ, ನೃತ್ಯ, ನಟಿಸುವುದರಲ್ಲಿ ಮಗ್ನರಾಗಿ ವಿಭಿನ್ನತೆ ಪ್ರತಿಭೆಗಳನ್ನು ತೋರಿಸಿದರು. ಅಧ್ಯಕ್ಷೆ ನಾಟ್ಯ ಸರಸ್ವತಿ, ಶುಭಾ ಧನಂಜಯ್ ಅವರ ನೇತೃತ್ವದಲ್ಲಿ ನಾಡಿನಾದ್ಯಂತ ಸಂಗೀತ ನೃತ್ಯೋತ್ಸವಗಳನ್ನು ನಡೆಸುವ, ಶಿಷ್ಯವೇತನ, ಮಾಶಾಸನ ನೀಡುವ ಮತ್ತು ಹೊಸಪ್ರತಿಭೆಗಳಿಗೆ ವೇದಿಕೆಗಳನ್ನು ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ” ಎಂದು ಶ್ಲಾಘಿಸಿದರು.

“ಸಾಮಾಜಿಕ ನ್ಯಾಯದ ಪರಿಧಿಯಲ್ಲಿ ಕೆಲಸ ಮಾಡುವ ಹೊಸ ಪಡೆಯನ್ನು ಸೃಷ್ಟಿಸುವ ಹಾಗೂ ಸಂಗೀತ, ನೃತ್ಯ ಅಕಾಡೆಮಿ ಅವಕಾಶ ವಂಚಿತರಿಗೆ ವೇದಿಕೆಗಳನ್ನು ಕಲ್ಪಿಸುವ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ತಯಾರಿ ನಡೆಯುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಚಿವ ಜಿ ಪರಮೇಶ್ವರ್ ಪ್ರಜಾಪ್ರಭುತ್ವದ ರಾಜರೇ?
ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಘವೇಂದ್ರ ಸಿರಿಗೆರೆ, ಖಜಾಂಚಿ ಪ್ರಶಾಂತರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ, ಸಿದ್ಧಾರ್ಥ ಎಜುಕೇಶನಲ್ ಅಂಡ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಕಾರ್ಯದರ್ಶಿ ಹುಸೇನಪ್ಪ ಹಂಚಿನಾಳ್, ಸಂಜೋತಾ ಸಂಸ್ಥೆಯ ಶೈಲಜಾ ಹಿರೇಮಠ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾದ ಪದ ದೇವರಾಜ್, ಹುಸೇನ್ ದಾಸ್ ಕನಕಗಿರಿ, ಶಂಕರ್ ಹೂಗಾರ್ ಮತ್ತು ಜಾನಪದ ಅಕಾಡೆಮಿಯ ಕೆಂಕೆರೆ ಮಲ್ಲಿಕಾರ್ಜುನ್, ಸಾಹಿತ್ಯ ಅಕಾಡೆಮಿಯ ಅಜ್ಮೀರ್ ನಂದಾಪುರ, ಸೋಮಶೇಖರ ಸೇರಿದಂತೆ ಇತರರು ಇದ್ದರು.
