ರಾಜ್ಯ ಸರ್ಕಾರ ಸರ್ಕಾರಿ ಶಾಲೆ ಮುಚ್ಚುವ ‘ಹಬ್ ಆಂಡ್ ಸ್ಪೋಕ್’ ಜಾರಿಗೊಳಿಸಿ ಶಾಲೆ ಮುಚ್ಚುವ ಮೂಲಕ ಬೆನ್ನಿಗೆ ಚೂರಿ ಇರಿಯುವ ಸರ್ಕಾರದ ನಡೆ ಖಂಡನೀಯ ಎಂದು ಎಐಡಿಎಸ್‌ಒ ಕೊಪ್ಪಳ ಜಿಲ್ಲಾ ಸಂಚಾಲಕ ಗಂಗರಾಜ್ ಅಳ್ಳಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮೊದಲ ಹಂತದಲ್ಲಿ 6000ಕ್ಕೂ ಅಧಿಕ ಸರ್ಕಾರಿ ಶಾಲೆ ಮುಚ್ಚಲು ಹೊರಟಿರುವ ಸರ್ಕಾರದ ನಡೆ ಬಡ ವಿದ್ಯಾರ್ಥಿಗಳ ಹಾಗೂ ಜನ ವಿರೋಧಿ ನಿಲುವಿಗೆ ಎಐಡಿಎಸ್‌ಓ ಹಾಗೂ ರಾಜ್ಯದ ಜನತೆಯ ಪ್ರತಿರೋಧಕ್ಕೆ ಕಿವಿಗೊಡದೆ, ಮಾದರಿ ಶಾಲೆಗಳ ಹೆಸರಿನಲ್ಲಿ ರಾಜ್ಯದ ಸಾವಿರಾರು ಶಾಲೆಗಳನ್ನು ಮುಚ್ಚಲು ಹೊರಟಿರುವ ಈ ಬಜೆಟ್ ಖಂಡನೀಯ” ಎಂದರು.
“500 ಪಬ್ಲಿಕ್ ಶಾಲೆಗಳ ನಿರ್ಮಾಣ ಸ್ವಾಗತಾರ್ಹವಾಗಿದ್ದರೂ, ಈಗಾಗಲೇ ಇರುವ ಶಾಲೆಗಳನ್ನು ಮುಚ್ಚಲು ಇದು ಸಮಂಜಸವಲ್ಲ. ಬೆನ್ನಿಗೆ ಚೂರಿ ಇರಿಯುವ ಸರ್ಕಾರದ ನಡೆಯನ್ನು ರಾಜ್ಯದ ಎಐಡಿಎಸ್ಒ ತೀವ್ರವಾಗಿ ಖಂಡಿಸುತ್ತದೆ. ರಾಜ್ಯಾದ್ಯಂತ 59,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇದ್ದು, ಕೇವಲ 5,267 ಹುದ್ದೆಗಳ ಭರ್ತಿಯ ಅವಶ್ಯಕತೆಗೆ ಸಮರ್ಪಕವಾಗಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿಯೂ ಇರುವ ಉಪನ್ಯಾಸಕರ ಕೊರತೆಯನ್ನು ಈ ಬಜೆಟ್ ನೀಗಿಸಿಲ್ಲ. ಕರ್ನಾಟಕದ ಲಕ್ಷಾಂತರ ಅರ್ಹ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಶಿಷ್ಯವೇತನ ಬಂದಿಲ್ಲ ಎಂಬ ವಿದ್ಯಾರ್ಥಿಗಳ ದೂರು ಸರ್ಕಾರದ ಕಿವಿ ತಲುಪಿದ್ದೂ, ಬಜೆಟ್‌ನಲ್ಲಿ ವಿದ್ಯಾರ್ಥಿಗಳ ಶಿಷ್ಯವೇತನಕ್ಕೆ ಸಮರ್ಪಕ ಹಣ ನೀಡದೇ ಇರುವುದು ತೀವ್ರ ವಿಷಾದನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕುಡಿಯುವ ನೀರಿನ ಸಮಸ್ಯೆ : ಜಿಲ್ಲಾಧಿಕಾರಿಗಳಿಗೆ ಮೋರಗಾನಹಳ್ಳಿ ಗ್ರಾಮಸ್ಥರ ಅಳಲು
“ರಾಜ್ಯಾದ್ಯಂತ ಜನ ಹೋರಾಟದ ಫಲಶೃತಿಯಾಗಿ ಕಡು ಶಿಕ್ಷಣ ವಿರೋಧಿ ಎನ್ಇಪಿ-2020ನ್ನು ಹಿಂಪಡೆದಿರುವ ರಾಜ್ಯ ಸರ್ಕಾರವು, ಶಾಲಾ ಹಂತದಲ್ಲೇ ಕೌಶಲ್ಯ ಶಿಕ್ಷಣವನ್ನು ಉತ್ತೇಜಿಸುವ ಎನ್‌ಇಪಿ ಮಾದರಿಯಲ್ಲೇ ‘ಸ್ಕಿಲ್ ಅಟ್ ಸ್ಕೂಲ್’ ಯೋಜನೆಯನ್ನು ಘೋಷಿಸಿದೆ. ಯುಜಿಸಿ ಮಾರ್ಗಸೂಚಿ-2025ನ್ನು ಬಹಿರಂಗವಾಗಿ ವಿರೋಧಿಸುವ ರಾಜ್ಯ ಸರ್ಕಾರವು ಅದರಲ್ಲಿರುವಂತೆಯೇ, ರಾಜ್ಯದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಪ್ರೊಫೆಸರ್ ಆಫ್ ಪ್ರಾಕ್ಟಿಸ್’ ಜಾರಿಗೊಳಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ” ಎಂದು ಎಐಡಿಎಸ್ಒ ಆರೋಪಿಸಿದೆ.