ಗ್ರಾಮ ಪಂಚಾಯತಿಯ ಪಿಡಿಒ ಮೇಲೆ ಗ್ರಾಮ ಪಂಚಾಯತಿ ಸದಸ್ಯೆ ಮತ್ತು ಆಕೆಯ ಮಗ ಹಲ್ಲೆ ಎಸಗಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದಲ್ಲಿ ನಡೆದಿದೆ.
ಹಿರೇಮ್ಯಾಗೇರಿ ಪಂಚಾಯತಿಯ ಪಿಡಿಒ ರತ್ನಮ್ಮ ಗುಂಡಣ್ಣನವರ ಎಂಬವರ ಮೇಲೆ ಅದೇ ಪಂಚಾಯತಿಯ ಸದಸ್ಯೆ ಶಾಂತಮ್ಮ ಬಸಪ್ಪ ಬಂಡಿವಡ್ಡರ ಮತ್ತು ಆಕೆಯ ಪುತ್ರ ಭೀಮೇಶ ಬಸಪ್ಪ ಬಂಡಿವಡ್ಡರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಶಾಂತಮ್ಮ ಮತ್ತು ಭೀಮೇಶ್ ವಿರುದ್ಧ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಹಂಚಿಕೆಗೆ ಫಲಾನುಭವಿಗಳ ಆಯ್ಕೆಯಾಗಿ ಪಂಚಾಯತಿಯಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಮುಖಂಡರು ಭಾಗಿಯಾಗಿದ್ದರು.
ಚರ್ಚೆ ನಡೆಯುತ್ತಿದ್ದ ವೇಳೆ, ಮನೆ ಹಂಚಿಕೆ ವಿಚಾರವಾಗಿ ಪಿಡಿಒ ರತ್ನಮ್ಮ ಮತ್ತು ಸದಸ್ಯೆ ಶಾಂತಮ್ಮ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ರತ್ನಮ್ಮ ಮೇಲೆ ಶಾಂತಮ್ಮ ಏಕಾಏಕಿ ದಾಳಿಮಾಡಿದ್ದಾರೆ. ಶಾಂತಮ್ಮ ಜೊತೆಗೆ ಆಕೆಯ ಪುತ್ರನೂ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರತ್ನಮ್ಮ ಗುಂಡಣ್ಣನವರ ಅವರ ಮೇಲೆ ಅದೇ ಪಂಚಾಯಿತಿಯ ಸದಸ್ಯೆ ಹಾಗೂ ಪುತ್ರ ಸೇರಿ ಹಲ್ಲೆ ಮಾಡಿದ ಘಟನೆ ಗುರುವಾರ ಪಂಚಾಯಿತಿ ಕಚೇರಿಯಲ್ಲಿ ನಡೆದಿದೆ.#PDO #Koppal #Grampanchayat pic.twitter.com/5ajN6wda3I
— Prajavani (@prajavani) February 27, 2025
ಘಟನೆ ಸಂಬಂಧ ಪಿಡಿಒ ರತ್ನಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ಏಕಾಏಕಿ ತಮ್ಮ ಮೇಲೆ ಹಲ್ಲೆ ನಡೆಸಿದ್ದು, ಕತ್ತು ಹಿಚುಕಿ ಕೊಲೆಗೆ ಯತ್ನಿಸಿದ್ದಾರೆ. ತಡೆಯಲು ಬಂದ ಸಿಬ್ಬಂದಿ ಅಂದಪ್ಪ ಮೇಲೂ ಹಲ್ಲೆ ನಡೆಸಿದ್ದು, ಜೀವ ಬೆದರಿಕೆ ಹಾಕಿದ್ದಾರೆ” ಎಂದು ದೂರಿನಲ್ಲಿ ವಿವರಿಸಿದ್ದಾರೆ.