ಆಗಸ್ಟ್ 19ರಂದು ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡಲು ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡಿ ಅಂಗೀಕರಿಸಲು ಸದನದಲ್ಲಿ ಮಂಡನೆ ಮಾಡಬೇಕು. ಅಂದು ನಾಗಮೋಹನ ದಾಸ್ ಅವರ ಒಳಮೀಸಲಾತಿ ವರದಿ ಯಥಾವತ್ ಜಾರಿಯಾಗದಿದ್ದರೆ ರಕ್ತಪಾತದದ ಹೋರಾಟ ನಡೆಯುತ್ತದೆ ಎಂದು ಮಾದಿಗ ಜಾತಿ ಉಪಜಾತಿ ಸಂಘಟನೆಗಳ ಜಿಲ್ಲಾ ಪ್ರಧಾನ ಸಂಚಾಲಕ ಣೇಶ ಹೊರತಟ್ನಾಳ ಎಚ್ಚರಿಸಿದರು.
ನಾಗಮೋಹನ ದಾಸ್ ಅವರ ವೈಜ್ಞಾನಿಕ ಒಳಮೀಸಲಾತಿ ಯಥಾವತ್ ಜಾರಿಗೊಳಿಸಲು ಚರ್ಚಿಸುವಂತೆ ಒತ್ತಾಯಿಸಿ ಜಾತಿ ಉಪಜಾತಿ ಸಂಘಟನೆಗಳ ಕೊಪ್ಪಳ ಜಿಲ್ಲಾ ಒಕ್ಕೂಟ ಹಾಗೂ ಮಾದಿಗ ಮಹಾಸಭಾದ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಬಳಿಕ ನಗರದ ಅಶೋಕ ವೃತ್ತದಿಂದ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನಿವಾಸದವರೆಗೂ ತಮಟೆ ಭಾರಿಸುವುದರ ಮೂಲಕ ತೆರಳಿ ಶಾಸಕರ ಅನುಪಸ್ಥಿತಿಯಲ್ಲಿ ಸಹೋದರ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದರು.
“ನಾಗಮೋಹನದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವಂತೆ ಸಂಪುಟ ಸಭೆಯಲ್ಲಿ ಚರ್ಚೆ ನೆಡೆಸಿ ಶಿಫಾರಸು ಮಾಡಲು ಒತ್ತಾಯಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಮಣ್ಣ ಚೌಡ್ಕಿ ಮಾತನಾಡಿ, “ಆಗಸ್ಟ್ 4ರಂದು ನ್ಯಾ. ಎಚ್ ಎನ್ ನಾಗಮೋಹನದಾಸ್ ಆಯೋಗವು ವರದಿ ನೀಡಿದೆ. ಅದಾದ 3 ದಿನಗಳಲ್ಲಿ ಸಂಪುಟ ಸಭೆಯಲ್ಲಿ ವರದಿ ಅಂಗೀಕರಿಸಿದ ಸರ್ಕಾರವು ವರದಿಯನ್ನು ಸಚಿವರುಗಳಿಗೆ ಅಧ್ಯಯನ ಮಾಡಿ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಲು ಸಲಹೆ ನೀಡಿದೆ. ಆಗಸ್ಟ್ 19ರಂದು ದಾಸ್ ಆಯೋಗದ ವರದಿ ಯಥಾವತ್ತಾಗಿ ಜಾರಿಗೆ ತರುವುದರ ಕುರಿತು ವಿಶೇಷ ಸಂಪುಟ ಸಭೆ ನಡೆಸುತ್ತಿದೆ. ಶಾಸಕ ಸ್ಥಾನದಲ್ಲಿರುವ ತಾವು ಈ ಸಂದರ್ಬದಲ್ಲಿ ಸಂಪುಟ ಸಭೆಯಲ್ಲಿ ಖುದ್ದಾಗಿ ಮಾತನಾಡಿ ನ್ಯಾ.ನಾಗಮೋಹನ ದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವುದರ ಬಗ್ಗೆ ನಿಗಾ ವಹಿಸಬೇಕು” ಎಂದು ಒತ್ತಾಯಿಸಿದರು.
“ಒಂದೊಮ್ಮೆ ಒಳಮೀಸಲಾತಿ ಜಾರಿಗೆ ಕೆಲವು ಸಚಿವರು ವಿರೋಧ ಮಾಡಿದರೆ ತಾವುಗಳು ಪ್ರಸ್ತುತ ವರದಿಯಲ್ಲಿ 5 ಗುಂಪುಗಳಿಗೆ ನೀಡಿದ ಮೀಸಲಾತಿ ಶಿಫಾರಸಿನಲ್ಲಿ ಮಾದಿಗ ಜಾತಿ ಉಪಜಾತಿಗಳಿಗೆ ಶೇ.6ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿ ಘೋಷಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು” ಎಂದರು.
ಈ ವೇಳೆ ಮಲ್ಲಿಕಾರ್ಜುನ ಪೂಜಾರ ಮಾತನಾಡಿ, “ಸರಕಾರವು ಕೆಲವು ಶಾಸಕರ ಒತ್ತಡಕ್ಕೊಳಗಾಗಿ ವಿನಾಕಾರಣ ವಿಳಂಬನೀತಿ ಅನುಸರಿಸುತ್ತಿದೆ. ತಾಂತ್ರಿಕ ದೋಷದ ಹೆಸರಲ್ಲಿ ಈ ವರದಿ ಅಧ್ಯಯನ ಮಾಡುವುದಕ್ಕೆ ಮತ್ತೊಮ್ಮೆ ಕೈ ಹಾಕಿ ಸಂಪುಟ ಉಪಸಮಿತಿ ನೇಮಿಸಲು ಸರ್ಕಾರವು ಮುಂದಾದರೆ ತಾವು ಗಟ್ಟಿಯಾಗಿ ನ್ಯಾಯಬದ್ಧವಾಗಿ ಮಾದಿಗ ಜಾತಿ ಉಪಜಾತಿಗಳಿಗೆ ಸಂಬಂಧಿಸಿದ ಒಳಮೀಸಲಾತಿಯನ್ನು ತಮಿಳುನಾಡು ಮಾದರಿಯಂತೆ ಆದ್ಯತಾ ಮೀಸಲಾತಿ ಜಾರಿಗೆ ತರುವಂತೆ ಮಾತನಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮೊರಾರ್ಜಿ ದೇಸಾಯಿ ವಸತಿ ಕಾಲೇಜಿಗೆ ಪ್ರಥಮ ಪಿಯುಸಿ ದಾಖಲಾತಿಗೆ ಅರ್ಜಿ ಆಹ್ವಾನ
“ಕಾಲಹರಣ ಮಾಡುವ ಮೂಲಕ ಈಗಾಗಲೇ ನೆನೆಗುದಿಗೆ ಬಿದ್ದಿರುವ ನೇಮಕಾತಿಗಳಿಗೆ ಇನ್ನಷ್ಟು ವಿಳಂಬಕ್ಕೆ ಅವಕಾಶ ಕೊಟ್ಟು ಸಾರ್ವಜನಿಕರಲ್ಲಿ ತಪ್ಪು ಸಂದೇಶವನ್ನು ಸರ್ಕಾರವೇ ರವಾನಿಸಿದಂತಾಗುತ್ತದೆ. ನಾವುಗಳು ಸರ್ಕಾರಕ್ಕೆ ಅಸಹಕಾರ ಚಳವಳಿ ಮೂಲಕ ಹೋರಾಟವನ್ನು ತೀವ್ರಗೊಳಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳು, ಪ್ರಗತಿಪರರು 29 ಉಪಜಾತಿಗಳ ಮುಖಂಡರು ಭಾಗಿಯಾಗಿದ್ದರು.