ಕಳೆದ ಎರಡು ದಿನಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಆಲಿಕಲ್ಲು ಸಹಿತ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 110 ಕೋಟಿ ರೂ. ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ತಾಲೂಕುಗಳಲ್ಲಿ ಗುರುವಾರ-ಶುಕ್ರವಾರ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಆಲಿಕಲ್ಲಿನ ಹೊಡೆತಗಳಿಂದಾಗಿ ಭತ್ತ, ಸಜ್ಜೆ, ಮೆಕ್ಕೆಜೋಳ, ಬಾಳೆ ಸೇರಿದಂತೆ ನಾನಾ ಬೆಳೆಗಳು ನೆಲಕಚ್ಚಿವೆ. ನಾಶವಾಗಿವೆ ಎಂದು ಜಿಲ್ಲೆಯ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಂಭವಿಸಿರುವ ಬೆಳೆ ಹಾನಿಯ ಬಗ್ಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಪಟ್ಟದಕಲ್ ನೇತೃತ್ವದಲ್ಲಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 10,631 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಸುಮಾರು 110 ಕೋಟಿ ರೂ. ಮೌಲ್ಯದ ಬೆಳೆ ನಾಶವಾಗಿದೆ ಎಂದು ಸಮೀಕ್ಷೆಯಿಂದ ಗೊತ್ತಾಗಿದೆ.
ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ 3,925 ಹೆಕ್ಟೇರ್, ಕಾರಟಗಿ ತಾಲೂಕಿನಲ್ಲಿ 4,181 ಹೆಕ್ಟೇರ್ ಹಾಗೂ ಕನಕಗಿರಿ ತಾಲೂಕಿನಲ್ಲಿ 2,522 ಹೆಕ್ಟೇರ್ ಪ್ರದೇಶದಲ್ಲಿ (ಒಟ್ಟು 10,631 ಹೆಕ್ಟೇರ್) ಬೆಳೆ ಹಾನಿಯಾಗಿದೆ.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಕಾಯ್ದೆ | ಮೂಗಿಗೆ ತುಪ್ಪ ಹಚ್ಚಲು ಮನೆ ಬಾಗಿಲಿಗೆ ಬರುತ್ತಿದೆ ಬಿಜೆಪಿ!
ಮಳೆ ಅಬ್ಬರ ಮತ್ತು ಬೆಳೆ ಹಾನಿಯ ಬಗ್ಗೆ ಮಾತನಾಡಿರುವ ಸಹಾಯಕ ಕೃಷಿ ನಿರ್ದೇಶಕ ಸಂತೋಷ್ ಪಟ್ಟದಕಲ್, “ಕೊಪ್ಪಳ ಜಿಲ್ಲೆಯ ವಿವಿಧ ಭಾಗದಲ್ಲಿ ಭಾರಿ ಮಳೆಯಾಗಿದೆ. ಜೋರು ಗಾಳಿಯೂ ಬೀಸಿದೆ. ಪರಿಣಾಮ ದೊಡ್ಡ ಪ್ರಮಾಣದ ಹಾನಿಯಾಗಿದೆ. ರೈತರ ಜಮೀನಿನಲ್ಲಿ ಬೆಳೆಯಲಾಗಿದ್ದ ಬೇಸಿಗೆ ಭತ್ತದ ಬೆಳೆ ಹಾನಿಯಾಗಿದೆ. ಬೆಳೆ ವಿಮೆಯಡಿ ನೋಂದಾಯಿಸಿಕೊಂಡ ರೈತರಿಗೆ ವಿಮೆ ಯೋಜನೆಯಡಿ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೆಳೆ ಕಳೆದುಕೊಂಡಿರುವ ರೈತರು ತಮ್ಮ ಸಮೀಪದ ರೈತ ಕೇಂದ್ರಕ್ಕೆ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ” ಎಂದು ಹೇಳಿದ್ದಾರೆ.