“ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನಿಯರು ಪ್ರತಿಯೊಬ್ಬ ಭಾರತೀಯರ ಮನದಲ್ಲೂ ಅಮರರಾಗಿ ಉಳಿದಿದ್ದಾರೆ. ನಾವೆಲ್ಲರೂ ಅವರು ತೋರಿಸಿದ ಮಾರ್ಗದಲ್ಲಿ ನಡೆಯಬೇಕು” ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಕೊಪ್ಪಳ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ‘ನಮ್ಮ ದೇಶದ ಸ್ವಾತಂತ್ರ್ಯದ ಹೋರಾಟಗಾಥೆಯು ಸ್ಮರಣೀಯವಾಗಿದೆ’ ಎಂದರು.
“ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮದ ದಿನವಿದು. ಹೀಗಾಗಿ ಪ್ರತಿ ವರ್ಷ ನಾವು ಆಗಸ್ಟ್ 15ರಂದು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತೇವೆ. ಜವಾಹರ್ ಲಾಲ್ ನೆಹರು ಅವರು 1947 ಆಗಸ್ಟ್ 14ರ ಮಧ್ಯರಾತ್ರಿ ಭಾರತೀಯ ರಾಜ್ಯಾಂಗದ ಕುರಿತು ಮಾಡಿದ ಭಾಷಣವನ್ನು ನಾವು ಮತ್ತೆ ಮತ್ತೆ ಸ್ಮರಿಸಬೇಕಿದೆ. ಸ್ವಾತಂತ್ರ್ಯವು ‘ಭವಿಷ್ಯದೊಂದಿಗೆ ಅನುಸಂಧಾನ. ನಾವು ಹೊಸ ಹಾದಿ ತುಳಿಯುತ್ತಿದ್ದೇವೆ.’ ಎಂದು ಆ ವೇಳೆ ನೆಹರೂ ಅವರು ಹೇಳಿದ್ದರು” ಎಂದು ನೆನಪಿಸಿದರು.
ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಜಾತಿ, ಧರ್ಮ, ಭೇದ-ಭಾವ ಹೊಂದದೆ ಎಲ್ಲರೂ ಸಮಾನರಾಗಿ ಹೋರಾಡಿದ್ದಾರೆ. ಎಲ್ಲರೂ ಶಾಂತಿಯಿಂದ ಬಾಳೋಣ, ದೇಶಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾದ ಈ ದಿನದಂದು ಸಮತಾ ಸಮಾಜ ಕಟ್ಟಲು ಸಂಕಲ್ಪ ಮಾಡೋಣ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಹೋರಾಟಗಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದ ಕೊಪ್ಪಳ ಜಿಲ್ಲೆಯ ಮುಂಡರಗಿ ಭೀಮರಾಯರು, ಹಮ್ಮಿಗೆ ಕೆಂಚನಗೌಡರು, ಇಟಗಿಯ ವೀರಭದ್ರಯ್ಯನವರು, ಶಿರೂರು ವೀರಭದ್ರಪ್ಪನವರು, ಶಿವಮೂರ್ತಿಸ್ವಾಮಿ ಅಳವಂಡಿಯವರು, ಜನಾರ್ಧನರಾಯ ದೇಸಾಯಿಯವರು, ಎಲ್.ಕೆ.ಷರಾಫ್‌ರವರು, ಬಿಂದು ಮಾಧವರಾವ್, ಬಿ.ಕೆ. ಪ್ರಾಣೇಶಾಚಾರ್ಯರು, ಮುರಡಿ ಭೀಮಜ್ಜ ಮೊದಲಾದ ಧೀಮಂತರುಗಳು ಹೊಂದಿದ್ದ ದೇಶಪ್ರೇಮದ ಗುಣವು ನಮಗೆಲ್ಲ ಸ್ಫೂರ್ತಿಯಾಗಿದೆ. ಅವರ ಸೇವಾಗುಣವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ಕಳೆದ 14 ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಪಂಚ ಗ್ಯಾರಂಟಿ ಯೋಜನೆಯಡಿ ಸೌಲಭ್ಯಗಳನ್ನು ಒದಗಿಸಿದ್ದು, ಮಹಿಳೆಯರು, ಪಡಿತರ ಚೀಟಿದಾರರು, ಯುವಕರು ಸೇರಿದಂತೆ ರಾಜ್ಯದ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ರಾಜ್ಯ ಸರ್ಕಾರವು ಕಳೆದ ಮೇ-2023 ರಲ್ಲಿ ಅಸ್ವಿತ್ವಕ್ಕೆ ಬಂದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ 2024-25ನೇ ಸಾಲಿನ ಬಜೆಟ್‌ನಲ್ಲಿ 52,000 ಕೋಟಿ ರೂ.ಮೊತ್ತ ಮೀಸಲಿಡಲಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ತುಮಕೂರು | ದುಷ್ಕರ್ಮಿಗಳಿಗಿಲ್ಲ ಕಾನೂನಿನ ಭಯ; ರಾಗಿ ಪೈರಿನ ಮೇಲೆ ಉಳುಮೆ ಮಾಡಿ ಕ್ರೌರ್ಯ!
ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ್ ಹಿಟ್ನಾಳ್,ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಶಾಲಾ ಮಕ್ಕಳು ಇದ್ದರು.
