ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿಧ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ನಿಲ್ಲಿಸಲಾಗಿದೆ. ಇದು ಖಂಡನೀಯ. ಮೊದಲು ನೀಡುತ್ತಿದ್ದ ನಿಯಮವನ್ನೇ ಸರಕಾರ ಮುಂದುವರೆಸಬೇಕು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟಿಸಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಬಸವೇಶ್ವರ ಸರ್ಕಲ್‌ನವರೆಗೆ ವಿದ್ಯಾರ್ಥಿಗಳು ಸರಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮುಖಂಡ ದುರುಗೇಶ್ ಬರಗೂರು, “ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಪ್ರೋತ್ಸಾಹ ಧನದ ಹಣವನ್ನು ಕಾಂಗ್ರೆಸ್ ಸರಕಾರವು ಬೇರೆ ಬೇರೆ ಯೋಜನೆಗೆ ಬಳಕೆ ಮಾಡಿದೆ. ಆ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ” ಎಂದು ಆರೋಪಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ ಬಾರಿಗೆ ಶೇ.60-ಶೇ.74.9ರಷ್ಟು ಅಂಕ ಗಳಿಸಿ ಪಾಸಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಒಂದು ಬಾರಿ ಪ್ರೋತ್ಸಾಹ ಧನ ರೂ.7000, ಶೇ.75ರಷ್ಟು ಪಡೆದರೆ ರೂ. 15000 ಪ್ರೋತ್ಸಾಹ ಧನ ಕೊಡುತ್ತಿದ್ದರು. ಈಗ ಅದನ್ನು ಬದಲಾಯಿಸಿ ಶೇ.60-ಶೇ.74.9 ಅಂಕಗಳಿಗೆ ಕೊಡುವುದನ್ನು ಕೈಬಿಡಲಾಗಿದೆ. ಕೇವಲ ಶೇ.75ರಷ್ಟು ಅಂಕವನ್ನು ಮಾತ್ರ ಉಳಿಸಿಕೊಂಡಿದ್ದಾರೆ. ಈ ಹಿಂದೆ ಆದಾಯ ಮಿತಿ ಇರಲಿಲ್ಲ. ಈಗ, ವಾರ್ಷಿಕ 6 ಲಕ್ಷ ಆದಾಯ ಮಿತಿ ನಿಗದಿಪಡಿಸಿದ್ದಾರೆ. ಹಾಗೆಯೇ ಪಿಯುಸಿ, ಪದವಿಯಲ್ಲಿ ಶೇ.75ರಷ್ಟು ಅಂಕ ಗಳಿಸಿದವರಿಗೂ ಸಹ 6 ಲಕ್ಷ ಆದಾಯ ಮಿತಿ ನಿಗದಿಪಡಿಸಿ ಆದೇಶ ಹೊರಸಿದೆ. ಸರಕಾರ ವಿದ್ಯಾರ್ಥಿ ವಿರೋಧಿ ನೀತಿ ಯೋಜನೆಯನ್ನು ಜಾರಿಗೊಳಿಸಿದರೆ, ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳ ಜೀವನಕ್ಕೆ ಉನ್ನತ ವ್ಯಾಸಂಗಕ್ಕೆ ಅಪಾಯವೂ ಇದೆ ಎಂದರು.
ಇದನ್ನು ಓದಿದ್ದೀರಾ? ತುಮಕೂರು | ಗೃಹ ಸಚಿವರ ಸ್ವಕ್ಷೇತ್ರದಲ್ಲೇ ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಸ್ಮಶಾನವಿಲ್ಲದೆ ಪರದಾಟ!
ಸರಕಾರ ಇದನ್ನು ಎಚ್ಚೆತ್ತುಕೊಂಡು ಈ ನೀತಿಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಮರಿಸ್ವಾಮಿ , ಶರಣು ಹಾಗೂ ಕಾಲೇಜು ವಿದ್ಯಾರ್ಥಿಗಳು ಇನ್ನಿತರರು ಉಪಸ್ಥಿತರಿದ್ದರು.
