ಉದ್ಯಮಿಗಳಿಗೆ ರೈತರ ಜಮೀನು ಕಡಿಮೆ ದರದಲ್ಲಿ ಖರೀದಿಸಿ ಬಡಜನರ ಹೊಟ್ಟೆಗೆ ಬಟ್ಟೆ ಕಟ್ಟುವ ಹುನ್ನಾರ ನಡೆಯುತ್ತಿದೆ ಎಂದು ರೈತ ಮುಖಂಡ ಹಾಗೂ ಸಂಯುಕ್ತ ಮೋರ್ಚಾ ರಾಕೇಶ್ ಟಿಕಾಯತ್ ಅವರು ಹೇಳಿದರು.
ಕೊಪ್ಪಳ ನಗರದ ಮೇ ಸಾಹಿತ್ಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಸ್ವಾತಂತ್ರ್ಯೋತ್ಸವದ ಶತಮಾನ ಮಹೋತ್ಸವದ ಹೊತ್ತಿಗೆ ರೈತರ ಜಮೀನಿನ ಶೇ.70ರಷ್ಟನ್ನು ಉದ್ಯಮಿಗಳಿಗೆ ಕೊಟ್ಟು, ಕೃಷಿಕರನ್ನು ಅತಂತ್ರ ಮಾಡುವ ಸಂಚು ರೂಪಿಸುತ್ತಿದೆ. ಇದರ ವಿರುದ್ಧ ದೇಶಾದ್ಯಂತ ಪ್ರತಿರೋಧದ ದನಿ ಕೇಳಬೇಕಿದೆ. ಬಂಡವಾಳಶಾಹಿಗಳಿಂದ ಭೂಮಿ ಉಳಿಸಬೇಕಿದೆ” ಎಂದು ತಿಳಿಸಿದರು.
“ಚುನಾವಣೆಯ ಬಳಿಕ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ರೈತರ ಬೇಡಿಕೆಗೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ರೈತರ ಹೋರಾಟ ಸದಾ ಜಾರಿಯಲ್ಲಿ ಇರಲಿದೆ” ಎಂದು ಘೋಷಿಸಿದರು.
“ರೈತರನ್ನು ಪರಾವಲಂಬಿಯಾಗಿ ಮಾಡುವ ಸಂಚುಗಳನ್ನು ದೇಶದ ಜನತೆ ಒಟ್ಟಾಗಿ ವಿಫಲಗೊಳಿಸಬೇಕಿದೆ. ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಒದಗಿರುವ ಆತಂಕ ವ್ಯಕ್ತವಾಗುತ್ತಿದೆ. ಕಳೆದ ಹಲವು ವರ್ಷಗಳಲ್ಲಿ ದೇಶದ ವಿವಿಧೆಡೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಅದು ಸ್ಪಷ್ಟವಾಗುತ್ತದೆ” ಎಂದು ಟಿಕಾಯತ್ ಕಳವಳ ವ್ಯಕ್ತಪಡಿಸಿದರು.
“ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರಗಳು ಕೃಷಿಕರಿಗೆ ಗೊತ್ತಿಲ್ಲದಂತೆ ನಡೆಯುತ್ತಿವೆ. ಉದ್ಯಮಿಗಳಿಗೆ ರೈತರ ಜಮೀನನ್ನು ಒಪ್ಪಿಸುವ ಯೋಜನೆಗಳು ಜಾರಿಯಾಗುತ್ತಿವೆ. ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಪಕ್ಷಗಳ ಸರ್ಕಾರವನ್ನು ಅಧಿಕಾರಕ್ಕೆ ಬರುವಂತೆ ಉದ್ಯಮಗಳು ತಂತ್ರ ರೂಪಿಸುತ್ತವೆ. ಹೆದ್ದಾರಿ ನಿರ್ಮಾಣದಂಥ ಬೃಹತ್ ಯೋಜನೆಗಳ ಹೆಸರಿನಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಗಳು ನೀತಿ ರೂಪಿಸಿವೆ. ಇದರಿಂದ ದೇಶದ ಬಹುದೊಡ್ಡ ವರ್ಗವೊಂದು ತನ್ನ ನೆಲೆ ಕಳೆದುಕೊಳ್ಳುವ ಅಪಾಯ ಎದುರಾಗಿದೆ” ಎಂದು ಹೇಳಿದರು.
ಎರಡು ಬಗೆಯ ಹಿಂದೂ: “ಧರ್ಮ ರಾಜಕಾರಣವನ್ನೇ ಮೂಲವಾಗಿ ಮಾಡಿಕೊಂಡ ಪಕ್ಷದ ಹುನ್ನಾರದಿಂದಾಗಿ ಈಗ ಎರಡು ಬಗೆಯ ಹಿಂದೂಗಳನ್ನು ನಾವು ನೋಡುತ್ತಿದ್ದೇವೆ. ಪರಂಪರೆಯನ್ನು ನಂಬಿರುವ ಹಿಂದೂಗಳು ಒಂದೆಡೆಯಾದರೆ, ನಾಗಪುರದ ನಿರ್ದೇಶನದಲ್ಲಿ ಹೊಸ ಹಿಂದುತ್ವವಾದವನ್ನು ಅನುಸರಿಸುತ್ತಿರುವ ಹಿಂದೂಗಳು ಇನ್ನೊಂದೆಡೆ ಇದ್ದಾರೆ. ಎರಡನೇ ವರ್ಗದ ಹಿಂದೂಗಳನ್ನು ಸೃಷ್ಟಿಸುವ ಪ್ರಯತ್ನದೊಂದಿಗೆ ಅದರ ನಾಯಕರು ದಕ್ಷಿಣದತ್ತ ಬರುತ್ತಿದ್ದಾರೆ. ಇನ್ನು ಹತ್ತು ವರ್ಷಗಳಲ್ಲಿ ಈ ಭಾಗದಲ್ಲಿ ಅಧಿಕಾರ ಹಿಡಿಯುವುದು ಅವರ ಗುರಿ. ಆದರೆ ಇಂಥ ಹುನ್ನಾರಗಳನ್ನು ಜನಪರ ಚಳವಳಿಗಳು ತಡೆಯುವ ತಾಕತ್ತು ಹೊಂದಿವೆ” ಎಂದು ಟಿಕಾಯತ್ ಘೋಷಿಸಿದರು.
ರೈತ ಹೋರಾಟ: ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಮಸೂದೆಗಳನ್ನು ವಿರೋಧಿಸಿ, ದೆಹಲಿಯಲ್ಲಿ ಮೂರು ವರ್ಷಗಳ ಹಿಂದೆ ನಡೆದ ರೈತ ಚಳವಳಿಯು ಜನಪರ ಹೋರಾಟಕ್ಕೆ ಮಾದರಿಯಾದುದು ಎಂದು ಬಣ್ಣಿಸಿದ ರಾಕೇಶ್ ಟಿಕಾಯತ್, “ಸುಮಾರು 500 ಸಂಘಟನೆಗಳು ಒಟ್ಟಾಗಿ ಸೇರಿ ಸಂಯುಕ್ತ ಕಿಸಾನ್ ಮೋರ್ಚಾ ರೂಪಿಸಿ, ಬೃಹತ್ ಹೋರಾಟ ನಡೆಸಿದವು. ಮಸೂದೆಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಯಿತು. ಆದರೆ ಇದರಿಂದ ಗಳಿಸಿದ್ದೇನು ಎಂಬ ಪ್ರಶ್ನೆಗೆ ನನ್ನ ಉತ್ತರ. ಜನರು ಮಾತಾಡುವುದನ್ನು ಕಲಿತರು. ಧರ್ಮದ ಹೆಸರಿನಲ್ಲಿ ಜನರನ್ನು ಒಡೆದು ಆಳುವ ರಾಜಕಾರಣಕ್ಕೆ ಸರ್ವಧರ್ಮ, ಮತ, ಭಾಷೆಯ ಜನರು ಸೇರಿ ನಡೆಸಿದ ಹೋರಾಟವೇ ತಕ್ಕ ಪ್ರತ್ಯುತ್ತರ ನೀಡಿದೆ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರಿನಲ್ಲಿ ಮೋದಿ ವಾಸ್ತವ್ಯ | ವರ್ಷ ಕಳೆದರೂ ಪಾವತಿಯಾಗದ 80 ಲಕ್ಷ ರೂ. ಬಿಲ್; ಕಾನೂನು ಕ್ರಮದ ಎಚ್ಚರಿಕೆ ನೀಡಿದ ಹೋಟೆಲ್
“ನಿರುದ್ಯೋಗ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ನೀಡುವ ಬದಲಿಗೆ ಅಗ್ನಿವೀರ್ ಯೋಜನೆಯಂತಹ ಅವೈಜ್ಞಾನಿಕ ಯೋಜನೆ ರೂಪಿಸಿ, ನಾಲ್ಕು ವರ್ಷಗಳ ಬಳಿಕ ಅವರನ್ನು ಕೆಲಸದಿಂದ ತೆಗೆದು, ಉದ್ಯಮಿಗಳ ಸೇವೆಗೆ ಕಳಿಸುವ ಸಂಚು ನಡೆಸಲಾಗಿದೆ. ಉದ್ಯಮಗಳಿಗೆ ನೀಡುವ ಆಧ್ಯತೆಯನ್ನು ಕೃಷಿಕ ಸಮುದಾಯಕ್ಕೆ ನೀಡಬೇಕೇ ಹೊರತು, ಅವರ ಜಮೀನನ್ನು ಉದ್ಯಮಿಗಳಿಗೆ ಹಸ್ತಾಂತರಿಸುವ ಹುನ್ನಾರವನ್ನು ರೈತ ಸಂಘಟನೆಗಳು ಎದುರಿಸಲಿವೆ” ಎಂದು ಅವರು ಘೋಷಿಸಿದರು.
