ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆ ಮೂಲಕ ಮಕ್ಕಳ ಪ್ರತಿಭೆಗಳಿಗೆ ಶಕ್ತಿ ತುಂಬುವ ಕೆಲಸ ಹೆಚ್ಚಾಗಬೇಕು ಎಂದು ಸಚಿವ ಶಿವರಾಜ ಎಸ್ ತಂಗಡಗಿ ಹೇಳಿದರು.
ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ರಾಜ್ಯ ಬಾಲ ಭವನ ಸೊಸೈಟಿ (ರಿ)ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಹಯೋಗದೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 2025ರ ಮಕ್ಕಳ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ತಂಗಡಗಿ, “ನಮ್ಮ ಕಾಲದಲ್ಲಿ ಜಾನಪದ ಸೊಗಡು, ಗ್ರಾಮೀಣ ಕ್ರೀಡೆ, ಜಾನಪದ ಕಲೆಗಳನ್ನು ಪ್ರತಿಯೊಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿಯೇ ಪರಿಚಯಿಸುತ್ತಿದ್ದರು. ಆದರೆ, ಇಂದಿನ ಮಕ್ಕಳಲ್ಲಿ ಮೊಬೈಲ್ ಬಳಕೆ ಮೇಲೆಯೆ ಆಸಕ್ತಿ ಹೆಚ್ಚಾಗುತ್ತಿದೆ. ಚಿಕ್ಕ ಮಕ್ಕಳು ಜೋರಾಗಿ ಅಳತೊಡಗಿದರೆ, ಅವರಿಗೆ ಪಾಲಕರೆ ಮೊಬೈಲ್ ನೀಡುವುದು ಸಾಮಾನ್ಯವಾಗಿದ್ದು, ಈ ಪ್ರಕ್ರಿಯೆ ಕಡಿಮೆಯಾಗಬೇಕು. ಇದರ ಬದಲಿಗೆ ನಮ್ಮ ಸಂಸ್ಕೃತಿ, ಕಲೆ, ನಮ್ಮ ಹಿರಿಯರ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವುದು ಮತ್ತು ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ನೀಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು” ಎಂದರು.

“ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ವಿವಿಧ ಸ್ಪರ್ಧೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಕ್ಕಳಲ್ಲಿನ ಶಕ್ತಿ, ಪ್ರತಿಭೆಯನ್ನು ಹೊರತರುವಂತಹ ಕೆಲಸವಾಗುತ್ತಿರುವುದು ಸಂತಸದ ವಿಷಯ. ಇಂತಹ ಕಾರ್ಯಕ್ರಮಗಳನ್ನು ಜಿಲ್ಲಾ, ತಾಲೂಕು ಮಟ್ಟಗಳಲ್ಲಿ ಇನ್ನೂ ಹೆಚ್ಚಾಗಿ ಹಮ್ಮಿಕೊಂಡು ಮಕ್ಕಳ ಕಲೆಗೆ ಪ್ರೋತ್ಸಾಹ ನೀಡಬೇಕು. ಕೊಪ್ಪಳ ಜಿಲ್ಲಾ ಬಾಲ ಭವನ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ರೂ. 79 ಲಕ್ಷ ಅನುದಾನ ಬಂದಿದೆ. ಕಾರ್ಯಕ್ರಮದಲ್ಲಿ ಅಮೃತ ಮತ್ತು ಭೂಮಿಕಾ ಎಂಬ ಪುಟ್ಟ ಹೆಣ್ಣು ಮಕ್ಕಳು ಸಿನಿಮಾ ರೀತಿಯಲ್ಲಿ ಅತ್ಬುತವಾಗಿ ನೃತ್ಯ ಮಾಡಿರುವುದನ್ನು ನೋಡಿದರೆ, ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ತುಂಬಾ ಅವಶ್ಯಕತೆಯಿದೆ ಎಂಬುವುದು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳ ಸಂಖ್ಯೆ ಇನ್ನೂ ಹೆಚ್ಚಾಗಬೇಕು” ಎಂದು ಹೇಳಿದರು.
ಇದನ್ನೂ ಓದಿ: ಕೊಪ್ಪಳ | ಬೆನ್ನಿಗೆ ಚೂರಿ ಇರಿಯುವ ಸರ್ಕಾರದ ನಡೆ ಖಂಡನೀಯ: ಎಐಡಿಎಸ್‌ಒ ಸಂಚಾಲಕ ಗಂಗರಾಜ್ ಅಳ್ಳಳ್ಳಿ
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ರಾಜ್ಯ ಬಾಲ ಭವನ ಸೊಸೈಟಿಯ ಅಧ್ಯಕ್ಷ ಬಿ.ಆರ್.ನಾಯ್ಡು, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಗಣ್ಯರಾದ ಗಿರೀಶ್ ಕೋಟೆ, ನಟರಾಜ್, ಲಕ್ಷ್ಮೀ ನಾರಾಯಣ, ಗೂಳಪ್ಪ ಹಲಗೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಹಾಗೂ ಕೊಪ್ಪಳ ಜಿಲ್ಲಾ ಬಾಲಭವನ ಸಮಿತಿ ಕಾರ್ಯದರ್ಶಿ ಪರಶುರಾಮ ವಾಯ್. ಶೆಟ್ಟೆಪ್ಪನವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ ಸೇರಿದಂತೆ ವಿವಿಧ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಸಂಗೀತ ಶಿಕ್ಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

