ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ, ಗೊಂಡಬಾಳ ಗ್ರಾಮಗಳ ಸಮೀಪ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮುಂದಾಗಿರುವ ಯುಕೆಇಎಂ ಕಂಪನಿಯ ನಡೆಗೆ ಸ್ಥಳೀಯ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಾರ್ಖಾನೆ ನಿರ್ಮಾಣಕ್ಕೆ ಯಾವುದೇ ರೀತಿಯ ಅನುಮತಿ ಕೊಡಬಾರದು ಎಂದು ಜಿಲ್ಲಾಧಿಕಾರಿ ಸುರೇಶ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ತಾಲೂಕಿನ ಗೊಂಡಬಾಳ ಹಾಗೂ ಮುದ್ದಾಬಳ್ಳಿ ಗ್ರಾಮಗಳ ಮಧ್ಯ ನಿರ್ಮಾಣ ಮಾಡುತ್ತಿರುವ ಯುಕೆಇಎಮ್ ಅಗ್ರೀ ಇನ್ಫಾ ಲಿಮಿಟೆಡ್ ಕಂಪನಿಯು ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಎನ್‌ಒಸಿಗೆ ಅರ್ಜಿ ಸಲ್ಲಿಸಿದ್ದನ್ನು ತಿರಸ್ಕರಿಸಿ ಹಾಗೂ ವಿರೋಧ ವ್ಯಕ್ತಪಡಿಸಿ ಗೊಂಡಬಾಳ ಗ್ರಾಮ ಪಂಚಾಯತಿ ಕಾರ್ಯಾಲಯ ಬಹಿರಂಗ ನೋಟಿಸ್ ಜಾರಿ ಮಾಡಿತ್ತು.
ಕಾರ್ಖಾನೆ ಏನಾದರೂ ಸ್ಥಾಪನೆಯಾದರೆ ಗೊಂಡಬಾಳ ಹಾಗೂ ಮುದ್ದಾಬಳ್ಳಿ ಗ್ರಾಮ ಕೇವಲ 500 ಮೀಟರ್ ದೂರದಲ್ಲಿವೆ. ಕಾರ್ಖಾನೆಗಳ ಸ್ಥಾಪನೆಯಿಂದ ಸುತ್ತಮುತ್ತಲ ಗ್ರಾಮಗಳ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಾರ್ಖಾನೆಯ ಕಲುಷಿತ ನೀರಿನಿಂದ ಜೀವಜಂತುಗಳು ಹಾಗೂ ಸ್ಥಳೀಯ ಜಲಸಂಪತ್ತುಗಳು ಮಾಲಿನ್ಯಗೊಳ್ಳುತ್ತವೆ. ಈ ಪ್ರದೇಶದಲ್ಲಿ ವಿವಿಧ ಬಗೆಯ ಪಕ್ಷಿ ಪ್ರಭೇದಗಳಿದ್ದು ಅದರಲ್ಲೂ ರಾಷ್ಟ್ರೀಯ ಪಕ್ಷಿ ನವಿಲಿನ ಸಂತತಿ ಹೆಚ್ಚಿದ್ದು, ಅವುಗಳ ಸಂತತಿ ಸರ್ವನಾಶವಾಗಲಿದೆ. ಕಾರ್ಖಾನೆಯ ಉದ್ದೇಶಿತ ಜಾಗದಲ್ಲಿ ಈಗಾಗಲೇ ಸರಕಾರಿ ಮೊರಾರ್ಜಿ ವಸತಿ ಶಾಲೆಯನ್ನ ಪ್ರಾರಂಭಿಸಲು ಸರಕಾರದಿಂದ ಅನುಮೋದನೆ ನೀಡಲಾಗಿದೆ. ಕಾರ್ಖಾನೆ ಹೊಗೆಯು ಶ್ವಾಸಕೋಶದ ರೋಗಗಳು, ಚರ್ಮರೋಗಗಳು, ಟಿ.ಬಿ. ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಹುದು. ಕಾರ್ಖಾನೆಯಲ್ಲಿ ಫಾಸ್ಪರಿಕ್ ಆಮ್ಲ, ಸುಣ್ಣದ ನೀರು, ಕಾಸ್ಟಿಕ್ ಸೋಡಾ, ಹೈಡ್ರೋಫ್ಲೋರಿಕ್ ಆಮ್ಲ, ಸೋಡಿಯಂ ಹೈಪೊಕ್ಲೋರೈಟ್, ಹೈಡ್ರೋಜನ್ ಹಾಗೂ ಪೆರಾಕ್ಸೈಡ್‌ದಂತಹ ವಸ್ತುಗಳನ್ನು ಬಳಸಲಾಗುತ್ತದೆ. ಇವು ಚರ್ಮ ಮತ್ತು ಕಣ್ಣುಗಳಲ್ಲಿ ತೀವ್ರ ಸುಡುವಿಕೆ, ಉಸಿರಾಟದ ತೊಂದರೆಗಳು ಮತ್ತು ವಿಷವನ್ನು ಉಂಟುಮಾಡುತ್ತವೆ. ಆದ್ದರಿಂದ ಕಾರ್ಖನಗಳು ಕೊಪ್ಪಳ ಜಿಲ್ಲೆ ಯಾವ ಭಾಗದಲ್ಲೂ ಬೇಡ” ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳ | ವಿವಾಹೇತರ ಸಂಬಂಧ ಆರೋಪ : ಕೊಡಲಿಯಿಂದ ಹೊಡೆದು ವ್ಯಕ್ತಿ ಕೊಲೆ
ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮಾತನಾಡಿ, “ಉದ್ದೇಶಿತ ಸಕ್ಕರೆ ಕಾರ್ಖಾನೆ ಜಾಗ ಈಗಾಗಲೇ ಎನ್‌ಎ ಆಗಿದೆ. ಗ್ರಾಮಸ್ಥರು ಅಲ್ಲಿ ಕಾರ್ಖಾನೆ ಸ್ಥಾಪನೆ ಬೇಡ ಎನ್ನುತ್ತಿದ್ದಾರೆ. ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರದ ಗಮನಕ್ಕೆ ತರಲಾಗುವುದು” ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, “ನಮ್ಮ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಬೇಡವೆಂದು ಸ್ಥಳೀಯರು ಮನವಿ ಮಾಡಿದ್ದಾರೆ. ಇದನ್ನು ಸರ್ಕಾರದ ಗಮನಕ್ಕೆ ತಂದು ಸ್ಥಾಪನೆ ನಿಲ್ಲಿಸಲು ಕ್ರಮ ಕೈಗೊಳ್ಳುವೆ” ಎಂದು ಭರವಸೆ ನೀಡಿದರು.