ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ಚುನಾವಣಾ ಪೂರ್ವದಲ್ಲಿ ಬಿಸಿಯೂಟದ ನೌಕರರಿಗೆ ₹6,000 ವೇತನ ಹೆಚ್ಚು ಮಾಡುತ್ತೇವೆಂದು ಘೋಷಿಸಿದ್ದ ಪ್ರಕಾರವಾಗಿ ಕೂಡಲೇ 6ನೇ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ದುಡಿಯುವ ವರ್ಗ ನೌಕರರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಕೊಪ್ಪಳದ ಬಿಸಿಯೂಟ ನೌಕರರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯೂನಿಯನ್ ಕೊಪ್ಪಳ ಜಿಲ್ಲಾ ಸಮಿತಿಯು ಹೋರಾಟಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ, ಕೊಪ್ಪಳ ತಾಲೂಕಿನ ಬಿಸಿಯೂಟ ನೌಕರರು ಪ್ರತಿಭಟಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದರು.”
“ಚುನಾವಣೆಯ ಪೂರ್ವದಲ್ಲಿ ಪ್ರಿಯಾಂಕ ಗಾಂಧಿಯವರು ಘೋಷಿಸಿದ್ದ 6ನೇ ಗ್ಯಾರಂಟಿಯನ್ನು ಈಗಿನ ಸರ್ಕಾರ ಕೂಡಲೇ ಜಾರಿ ಮಾಡುವ ಮೂಲಕ ಬಿಸಿಯೂಟ ಯೋಜನೆಯಡಿ ದುಡಿಯುವ ನೌಕರರ ಈಗಿರುವ ವೇತನವನ್ನು ₹6,000ಕ್ಕೆ ಹೆಚ್ಚಿಸಬೇಕು. ನಿವೃತ್ತಿಯಾಗುವ ನೌಕರರಿಗೆ ಸರ್ಕಾರವು ಇಡುಗಂಟು ಹಣ ₹40,000 ಮಂಜೂರು ಮಾಡುತ್ತಿದ್ದು, ಅದನ್ನು 2 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು” ಎಂದು ಆಗ್ರಹಿಸಿದರು.

“ಅಪಘಾತಕ್ಕೀಡಾಗಿ ಸಾವನಪ್ಪಿದರೆ, ಆ ಕುಟುಂಬದವರಿಗೆ ₹10 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಒಂದು ವೇಳೆ ಗಾಯಗೊಂಡರೆ ಅಂಥವರಿಗೆ ಚಿಕಿತ್ಸೆಯ ವೆಚ್ಚ ಹಾಗೂ ಸೂಕ್ತ ಪರಿಹಾರವನ್ನು ನೀಡಬೇಕು. ಎಸ್‌ಡಿಎಂಸಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರ ಹೆಸರಿನಲ್ಲಿರುವ ಜಂಟಿ ಖಾತೆಯನ್ನು ರದ್ದುಗೊಳಿಸಿ ಮುಖ್ಯ ಅಡುಗೆದಾರರು ಹಾಗೂ ಶಾಲಾ ಮುಖ್ಯೋಪಾಧ್ಯಾಯರ ಹೆಸರಿನಲ್ಲಿ ಖಾತೆಯನ್ನು ತೆರೆಯಬೇಕು. ಪಿಂಚಣಿ ಯೋಜನೆ ಜಾರಿಯಾಗಬೇಕು. ಜತೆಗೆ ಬಿಸಿಯೂಟ ಮಹಿಳೆಯರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿದ್ದೀರಾ? ವಿಜಯಪುರ ಜಿಲ್ಲೆ ಶೇ.100ರಷ್ಟು ರಾಷ್ಟ್ರ ಪ್ರಗತಿ ಸಾಧನೆ; ಜಿಲ್ಲಾಧಿಕಾರಿ ಟಿ. ಭೂಬಾಲನ್‌ಗೆ ಪ್ರಶಂಸನಾ ಪತ್ರ
“ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ವೇತನವನ್ನು ಪಾವತಿಸಬೇಕು. ಬಿಸಿಯೂಟ ಅಡುಗೆಗೆ ಬಳಸಲು ಯೋಗ್ಯವಲ್ಲದ ದುರಸ್ತಿಯಲ್ಲಿರುವ ಒಲೆ, ಅಡುಗೆ ಸಾಮಾಗ್ರಿಗಳು ಸೇರಿದಂತೆ ಇತರ ಸಾಮಾಗ್ರಿಗಳನ್ನು ಕೂಡಲೇ ಬದಲಾಯಿಸಬೇಕು. ಸರ್ಕಾರ ಬೇಡಿಕೆಗಳನ್ನು ಈಡೇರಿಸಲು ವಿಳಂಬ ಮಾಡಿದಲ್ಲಿ ಈಗ ಧರಣಿ ನಡೆಸಿದ ಮಹಿಳೆಯರಿಂದ ತೀವ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಬಸವರಾಜ ಶೀಲವಂತರ, ಗಾಳೆಪ್ಪ ಮುಂಗೋಲಿ, ಮಕ್ಬೂಲ್ ರಾಯಚೂರು, ಪುಷ್ಪಾ ಮೇಸ್ತ್ರಿ, ಸುಮಂಗಲಾ ಕೊತಬಾಳ, ಶರಣಮ್ಮ ಬಂಡಿಹರ್ಲಾಪುರ, ರಾಜೇಶ್ವರಿ ಗಿಣಿಗೇರಿ, ಪದ್ಮಾ ಹುಲಗಿ, ಕಮಲಾದೇವಿ ದೊಡ್ಡಮನಿ, ಅನ್ನಪೂರ್ಣ, ರೆಹಮತಬಿ ಸೇರಿದಂತೆ ಇತರರು ಇದ್ದರು.