ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ, ಅದರಲ್ಲೂ ಜಿಲ್ಲಾಸ್ಪತ್ರೆಗಳಲ್ಲಿಯೇ ಬಾಣಂತಿಯರು ಮತ್ತು ನವಜಾತ ಶಿಶುಗಳು ಸಾವನ್ನಪ್ಪಿದ್ದ ಪ್ರಕರಣಗಳು ಹೆಚ್ಚುತ್ತಲೇ ಇವೆ. ದಾವಣಗೆರೆ, ಬೆಳಗಾವಿ ಸೇರಿದಂತೆ ಹಲವಾರು ಜಿಲ್ಲಾಸ್ಪತ್ರೆಯಲ್ಲಿ ಕಳೆದ ಆರು ತಿಂಗಳೊಳಗೆ ನೂರಾರು ಶಿಶುಗಳು ಸಾವನ್ನಪ್ಪಿವೆ. ಇದೀಗ, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಕುಕನೂರಿನ ಆಡೂರ್ ಗ್ರಾಮದ ನಿವಾಸಿ ರೇಣುಕಾ ಪ್ರಕಾಶ್ ಹಿರೇಮನಿ ಎಂಬವರು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಮಗು ಗರ್ಭದಲ್ಲೇ ಮೃತಪಟ್ಟಿತ್ತು. ಇದೀಗ, ತಾಯಿಯೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ರೇಣುಕಾ ಅವರು ಹೆರಿಗೆಗಾಗಿ ಸೋಮವಾರ ರಾತ್ರಿ ಕುಷ್ಟಗಿ ಆಸ್ಪತ್ರೆಗೆ ತೆರಳಿದ್ದರು. ಆದರೆ, ಅಲ್ಲಿ ಸರಿಯಾದ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಕಳಿಸಲಾಗಿತ್ತು. ಮಂಗಳವಾರ ಬೆಳಗಿನ ಜಾವ ಹೆರಿಗೆಗೆ ತಯಾರಿ ನಡೆಸಲಾಗಿತ್ತು. ಆದರೆ, ಆ ವೇಳೆಗಾಗಲೇ ಹೊಟ್ಟೆಯಲ್ಲಿಯೇ ಮಗು ಮೃತಪಟ್ಟಿತ್ತು. ಸಿಜೇರಿಯನ್ ಮಾಡಿ, ಮಗುವನ್ನು ಹೊರ ತೆಗೆಯಲಾಗಿತ್ತು. ತಾಯಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ರೇಣುಕಾ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.