ಕೆಕೆಆರ್‌ಟಿಸಿಯ ಕೊಪ್ಪಳ ವಿಭಾಗ ನೂತನ 4 ಅಮೋಘವರ್ಷ ನಾನ್ ಎಸಿ ಸ್ಲೀಪರ್ ಬಸ್‌ಗಳನ್ನು ಕೊಪ್ಪಳ-ಬೆಂಗಳೂರು ಹಾಗೂ ಕೊಪ್ಪಳ-ಬೀದರ್ ಮಾರ್ಗದಲ್ಲಿ ಆರಂಭಿಸಿ ಕಲ್ಯಾಣ-ಕರ್ನಾಟಕ ಜನರಿಗೆ ಸಿಹಿ ಸುದ್ಧಿ ನೀಡಿದೆ. ಸೋಮವಾರ ಕೊಪ್ಪಳ ಬಸ್ ನಿಲ್ದಾಣದಲ್ಲಿ ಹೊಸ ಬಸ್ಸುಗಳ ಸಂಚಾರಕ್ಕೆ ಜಿಲ್ಲೆ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, “ಕೊಪ್ಪಳ-ಬೆಂಗಳೂರು ಮತ್ತು ಕೊಪ್ಪಳ-ಬೀದರ್ ನಡುವೆ ಬಸ್ ಸಂಚಾರದಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಇದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಜಿಲ್ಲೆಯ ಜನರು ಇದರ ಸದುಪಯೋಗ ಪಡೆಯಬೇಕು” ಎಂದರು.
ಹೊಸ ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿದ ನಂತರ ಸಚಿವರು ಬಸ್ ಒಳಗಡೆ ಹೋಗಿ ಬಸ್ಸಿನ ಆಸನಗಳ ವ್ಯವಸ್ಥೆ ಹಾಗೂ ಅದರಲ್ಲಿರುವ ಸೌಲಭ್ಯಗಳ ಪರಿಶೀಲನೆ ನಡೆಸಿದರು. ಬಸ್‌ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗಬೇಕು ಮತ್ತು ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಜನರಿಗೆ ಸೇವೆ ನೀಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಬಾಲಕಿ ಕೊಂದ ಆರೋಪಿ ರಿತೇಶ್ ಎನ್‌ಕೌಂಟರ್; ಸರಿನಾ? ತಪ್ಪಾ? ಜನ ಏನಂತಾರೆ?!
ಬಸ್ ವೇಳಾಪಟ್ಟಿ
ಕೊಪ್ಪಳ ವಿಭಾಗಕ್ಕೆ 4 ಅಮೋಘವರ್ಷ ನಾನ್ ಎಸಿ ಸ್ಲೀಪರ್ ಬಸ್ ಸಿಕ್ಕಿದ್ದು, ಅವುಗಳಲ್ಲಿ ಎರಡು ಕೊಪ್ಪಳ-ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿವೆ. ಈ ಬಸ್ಸುಗಳು ರಾತ್ರಿ 10 ಗಂಟೆಗೆ ಕೊಪ್ಪಳ ಕೇಂದ್ರ ಬಸ್ ನಿಲ್ದಾಣದಿಂದ ಹೊರಡಲಿದೆ. ಕೊಪ್ಪಳ- ಬೀದರ್ ನಡುವೆ 2 ಬಸ್ಸುಗಳು ಸಂಚಾರ ಮಾಡಲಿದ್ದು, ಕೊಪ್ಪಳದಿಂದ ರಾತ್ರಿ 8.25 ಬಸ್ ಹೊರಡಲಿದೆ. ಈ ಬಸ್‌ಗಳು ವಾರದ ಎಲ್ಲಾ ದಿನಗಳಲ್ಲಿ ಸಂಚರಿಸಲಿದ್ದು, ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.