ಕೆಲವೇ ದಿನಗಳಲ್ಲಿ ಮುಂಗಾರು ಮಳೆ, ಗಾಳಿ, ಗುಡುಗು ಹಾಗೂ ಸಿಡಿಲು ಆರಂಭವಾಗಲಿರುವ ಹಿನ್ನೆಲೆ, ವಿದ್ಯುತ್ ಇಲಾಖೆ ರಸ್ತೆಯ ಅಕ್ಕಪಕ್ಕ ಇರುವ ವಿದ್ಯುತ್ ತಂತಿಗಳಿಗೆ ತಾಗುವ ಮರಗಳನ್ನು ಕಡಿಯಲಿದ್ದಾರೆ. ಆದರೆ ಈ ಕ್ರಮ ಪರಿಸರ ಹಾನಿಗೆ ಕಾರಣವಾಗುತ್ತಿದೆ. ಹಾಗಾಗಿ ಮರಗಳನ್ನು ಉಳಿಸಿ, ವಿದ್ಯುತ್ ತಂತಿಗಳನ್ನು ನೆಲದಡಿ ಅಳವಡಿಸುವಂತೆ ಜನಪರ ಸಂಘಟನೆಗಳ ಒಕ್ಕೂಟದ ಕೊಪ್ಪಳ ಜಿಲ್ಲಾಧ್ಯಕ್ಷ ಎಸ್ ಎ ಗಫಾರ್ ಆಗ್ರಹಿಸಿದ್ದಾರೆ.
ನಗರದ ಎಲ್ಲಾ ರಸ್ತೆಗಳ ಎರಡೂ ಬದಿಗಳಲ್ಲಿರುವ ವಿದ್ಯುತ್ ಕಂಬಗಳ ತಂತಿಗಳನ್ನು ಭೂಮಿಯಡಿಯಲ್ಲಿ ಅಳವಡಿಸುವ ಯೋಜನೆ ಜಾರಿಗೆ ತರುವುದಲ್ಲದೆ, ನಗರದ ಎಲ್ಲಾ ರಸ್ತೆಗಳ ಎರಡೂ ಬದಿಗಳಲ್ಲಿ ಸಸಿ ನೆಡುವ ಮೂಲಕ ನಗರ ಹಸಿರೀಕರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈಗ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ್ ಹಿಟ್ನಾಳ್, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮುಖ್ಯಮಂತ್ರಿಯೂ ಕಾಂಗ್ರೆಸ್ ಪಕ್ಷದವರಿದ್ದಾರೆ. ಈ ಯೋಜನೆ ರೂಪಿಸಿ ಜಾರಿಗೆ ತರಲು ಯಾವ ಅಡೆತಡೆಗಳೂ ಇಲ್ಲ. ನಿರ್ಲಕ್ಷ್ಯಕ್ಕೆ ಕಾರಣ ಏನು ತಿಳಿಯುತ್ತಿಲ್ಲ. ಜನಪ್ರತಿನಿಧಿಗಳು ಒಂದೇ ಪಕ್ಷದವರೂ ಇದ್ದರೂ ಇಂತಹ ಅವಧಿಯಲ್ಲಿ ಅನೇಕ ಬೃಹತ್ ಯೋಜನೆಗಳನ್ನು ತರದೆ ಇದ್ದರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾದೀತು ಎಂದರು.
ಇದನ್ನೂ ಓದಿ: ಕೊಪ್ಪಳ | ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ; ಇಬ್ಬರ ಬಂಧನ