ಓಲಾ ಎಲೆಕ್ಟ್ರಿಕ್ ವಾಹನ ಮಾರಾಟಗಾರರು ಗ್ರಾಹಕರಿಗೆ ಸೇವಾ ನ್ಯೂನತೆ ಎಸಗಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಪರಿಹಾರಕ್ಕಾಗಿ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿ ಆದೇಶಿಸಿದೆ.
ಗಂಗಾವತಿಯ ಶ್ರೀಕಾಂತ ಬಸವನಗೌಡ ರಾಯಚೂರಿನ ಓಲಾ ಎಲೆಕ್ಟ್ರಿಕ್ ವಾಹನ ಮಾರಾಟಗಾರರಿಂದ ಓಲಾ ಎಲೆಕ್ಟ್ರಿಕ್ ವಾಹನ ಖರೀದಿಸಿದ್ದಾರೆ. ಖರೀದಿ ಸಲುವಾಗಿ 2024ರ ಜೂ. 23ರಂದು ರೂ. 19,499ಗಳ ಮುಂಗಡ ಪಾವತಿ ಮಾಡಿದ್ದಾರೆ. ಐಡಿಎಫ್‌ಸಿ ಬ್ಯಾಂಕಿನಲ್ಲಿ 85,000 ರೂಗಳ ಸಾಲ ಪಡೆದು, ವಾಹನ ಕಾಯ್ದಿರಿಸಲು ರೂ. 2000 ಹಾಗೂ ನೋಂದಣಿಗಾಗಿ ರೂ. 8519 ಸೇರಿ ಒಟ್ಟು ರೂ. 30,018 ಗಳನ್ನು ಪಾವತಿಸಿದ್ದಾರೆ. ವಾಹನಕ್ಕೆ ವಿಮೆ ಮಾಡಿಸುವ ಸಲುವಾಗಿ ಕಂಪನಿ ಮತ್ತೆ ರೂ. 6,232 ಗಳನ್ನು ಪೆಡೆದುಕೊಂಡಿದ್ದಾರೆ. ಬಳಿಕ ಜು.26ರಂದು ವಾಹನ ಸಂಖ್ಯೆ ಕೆ.ಎ.37/ಇ.ಎಸ್-2399 ನೋಂದಣಿಯಾದ ಬಗ್ಗೆ ಕಂಪನಿ ತಿಳಿಸಿದೆ. ಆದರೆ ವಾಹನ ನೀಡಿಲ್ಲ.
ಈ ಸಂಬಂಧ ಶ್ರೀಕಾಂತ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಯೋಗ ಎದುರುದಾರರಿಗೆ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ. ಇನ್ನಿಬ್ಬರು ಎದುರುದಾರರು ವಕೀಲರ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲವನ್ನೂ ಪರಿಶೀಲಿಸಿದ ಆಯೋಗದ ಅಧ್ಯಕ್ಷೆ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯ ರಾಜು.ಎನ್.ಮೇತ್ರಿ, ಎದುರುದಾರರು ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಿರುವುದು ಹಾಗೂ ಸೇವಾ ನಿರ್ಲಕ್ಷ್ಯ ಎಸಗಿರುವುದು ಸಾಬೀತಾಗಿದೆ ಎಂದು ಪರಿಗಣಿಸುತ್ತಾ, ಎದುರುದಾರರಿಂದ ಉಂಟಾದ ಸೇವಾ ನ್ಯೂನತೆಗಾಗಿ ಹಾಗೂ ಅನುಚಿತ ವ್ಯಾಪಾರ ಪದ್ಧತಿಗಾಗಿ ಎದುರುದಾರರು ದೂರುದಾರರಿಂದ ಪಡೆದುಕೊಂಡ ವಾಹನ ಖರೀದಿ ಮೊತ್ತ ರೂ. 1,10,680 ಗಳನ್ನು ದೂರಿನ ದಿನಾಂಕದಿಂದ ಪಾವತಿಯಾಗುವವರೆಗೆ ವಾರ್ಷಿಕ ಶೇ. 6ರ ಬಡ್ಡಿ ಸಹಿತ ಹಾಗೂ ಮಾನಸಿಕ ಯಾತನೆಗಾಗಿ ರೂ.10,000 ಹಾಗೂ ದೂರಿನ ಖರ್ಚು ರೂ. 5,000 ಗಳನ್ನು ಪಾವತಿಸಲು ಆದೇಶಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳ | ಮುಕ್ತ ವ್ಯಾಪಾರ ಒಪ್ಪಂದ; ಕೇಂದ್ರ ಸರ್ಕಾರದ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕ ಸಮನ್ವಯ ಸಮಿತಿ ವಿರೋಧ
ವಾಹನಕ್ಕೆ ಸಂಬಂಧಿಸಿದ ಆರ್.ಸಿ. ಮತ್ತು ಮಾಲಿಕತ್ವ ವರ್ಗಾವಣೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಸೂಚನೆ ನೀಡಿದ್ದಾರೆ.