ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಾಣಾಪುರ ಮತ್ತು ಆನೆಗೊಂದಿ ಭಾಗದ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಅಕ್ರಮವಾಗಿ ಪಡೆಯಲಾಗಿದ್ದ ವಿದ್ಯುತ್ ಸಂಪರ್ಕವನ್ನು ಮಂಗಳವಾರ ಕಡಿತ ಮಾಡಲಾಗಿದ್ದು, ಹೋಟೆಲ್‌ಗಳಿಗೂ ಇದರ ಬಿಸಿ ತಟ್ಟಿದೆ.
ಇತ್ತೀಚೆಗೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಯುವಕನ ಕೊಲೆ ನಡೆದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ, ಅಧಿಕಾರಿಗಳು ಸರಣಿ ಸಭೆ ನಡೆಸಿದ್ದು, ಅಕ್ರಮ ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ಕಡಿವಾಣ ಹಾಕಲು ತಂಡಗಳನ್ನು ರಚಿಸಿದೆ. ಅಕ್ರಮವಾಗಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳನ್ನು ನಡೆಸುತ್ತಿದ್ದವರಿಗೆ ಚಾಟಿ ಬೀಸಿದ್ದಾರೆ.
ತಹಶೀಲ್ದಾರ್, ಅರಣ್ಯ, ಪ್ರವಾಸೋದ್ಯಮ, ಅಬಕಾರಿ, ಪೊಲೀಸ್ ಮತ್ತು ಜೆಸ್ಕಾಂ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಆನೆಗೊಂದಿ, ಸಾಣಾಪುರ ಭಾಗದಲ್ಲಿ ಕಾರ್ಯಾಚರಣೆ ನಡೆಸಿತು. ಸಾಣಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಭೂಮಿಯಲ್ಲಿ ಗುಡಿಸಲು ಕೊಠಡಿಗಳು ನಿರ್ಮಿಸಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದವರು ಸಮಯವಕಾಶ ನೀಡುವಂತೆ ಕೋರಿದರೆ, ಇನ್ನೂ ಕೆಲವರು ತಮ್ಮ ರೆಸಾರ್ಟ್ ಕುರಿತು ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ದಾಖಲೆ ತೋರಿಸಿದರು.
“ಅಕ್ರಮವಾಗಿ ನಿರ್ಮಿಸಿಕೊಂಡಿರುವ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳನ್ನು ತೆರವು ಮಾಡುವಂತೆ ಹಿಂದೆ ನೋಟಿಸ್ ನೀಡಿದ್ದರೂ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದ್ದರಿಂದ ಈಗ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ’ ಎಂದು ಗಂಗಾವತಿ ತಹಶೀಲ್ದಾರ್ ಯು ನಾಗರಾಜ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೈಲ್ವೆ ನಿಲ್ದಾಣದ ಬಳಿ ಮಹಿಳೆಯ ಮೃತದೇಹ ಪತ್ತೆ; ಕೊಲೆ ಶಂಕೆ
“ಹಿಂದೆ ಇದೇ ರೀತಿಯ ಕಾರ್ಯಾಚರಣೆ ನಡೆಸಿದ ಕೆಲವೇ ದಿನಗಳಲ್ಲಿ ರೆಸಾರ್ಟ್‌ಗಳು ಹಾಗೂ ಹೋಂಸ್ಟೇಗಳ ಮಾಲೀಕರು ಅಧಿಕಾರಿಗಳ ಗಮನಕ್ಕೆ ತಾರದೇ ಮರಳಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು. ಈಗಲೂ ಅದೇ ರೀತಿ ಮಾಡಿದರೆ ಪ್ರಕರಣ ದಾಖಲಿಸಲಾಗುವುದು” ಎಂದು ಪೊಲೀಸರು ಎಚ್ಚರಿಕೆ ನೀಡಿದರು.unauthorized resorts
ಈ ನಡುವೆ, “ಜಿಲ್ಲಾಡಳಿತದ ಈ ಕಟ್ಟುನಿಟ್ಟಿನ ಕ್ರಮ ಎಷ್ಟು ದಿವಸ ಜಾರಿಯಲ್ಲಿರುತ್ತದೆ ಎಂಬುದನ್ನು ಕಾದು ನೋಡಬೇಕು” ಎನ್ನುವ ಸ್ಥಳೀಯರ ಗುಸುಗಸು ಮಾತುಗಳೂ ಕೇಳಿಬರುತ್ತಿವೆ.