ರಾಜ್ಯ ಸರ್ಕಾರ ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನವನ್ನು ಕೈಬಿಡಬೇಕೆಂದು ಆಗ್ರಹಿಸಿ ಕೊಪ್ಪಳ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಾಹಿತಿ ಈಶ್ವರ ಹತ್ತಿ ಮಾತನಾಡಿ, “ಕೊಪ್ಪಳ ನಗರದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಎರಡು ವರ್ಷ ತುಂಬುತ್ತ ಬಂದಿರುವ ಖುಷಿ ಒಂದು ಕಡೆಯಾದರೆ, ಮತ್ತೊಂದು ಕಡೆ ರಾಜ್ಯ ಸರ್ಕಾರ ಅಷ್ಟೇ ಬೇಗ ವಿಶ್ವವಿದ್ಯಾಲಯ ಮುಚ್ಚವ ತೀರ್ಮಾನ ತೆಗೆದುಕೊಂಡಿರುವುದು ಶಿಕ್ಷಣ ಪ್ರೇಮಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೇಸರ ಮೂಡಿಸಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಕಲ್ಯಾಣ ಕರ್ನಾಟಕ ಭಾಗದ ಹೋರಾಟಗಾರರು ಅನಾರೋಗ್ಯಕರವಾದ ಕಾರ್ಖಾನೆಗಳನ್ನು ಮುಚ್ಚುವಂತೆ ಹೋರಾಟ ಮಾಡಬೇಕು, ಜತೆಗೆ ಶೈಕ್ಷಣಿಕ ವಿಶ್ವವಿದ್ಯಾಲಯ ಮುಚ್ಚಬೇಡಿ ಅಂತಲೂ ಹೋರಾಟ ಮಾಡಬೇಕಿದೆ. ಕಲ್ಯಾಣ ಕರ್ನಾಟಕ ಜನತೆ ನಿರಂತರವಾಗಿ ಹೋರಾಟದಲ್ಲಿ ಬದುಕು ಸವೆಸುವಂಥ ಪರಿಸ್ಥಿತಿ ಬಂದೊದಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಗತಿಪರ ಚಿಂತಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ 10 ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿದ್ದು, ಅದರಲ್ಲಿ 9 ವಿಶ್ವವಿದ್ಯಾಲಯ ಮುಚ್ವಲು ಹೊರಟ್ಟಿರುವುದು ನೋವಿನ ಸಂಗತಿ. ಕೊಪ್ಪಳ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಪಾವತಿಯಿಂದಲೇ ನಡೆಯುತ್ತಿದ್ದು, ಹಿಂದಿನ ಸರ್ಕಾರದಿಂದಾಗಲಿ, ಇಂದಿನ ಸರ್ಕಾರದಿಂದಾಗಲಿ ಯಾವುದೇ ಅನುದಾನ ಬಂದಿಲ್ಲ. ಬೀದರ್ ವಿಶ್ವವಿದ್ಯಾಲಯವನ್ನು ಯಾವ ಹಿನ್ನೆಲೆಯಲ್ಲಿ ಉಳಿಸಿಕೊಳ್ಳಲು ಪ್ರಯತ್ನ ನಡೆದಿದೆಯೋ ಅದೇ ಹಿನ್ನೆಲೆಯಲ್ಲಿ ಕೊಪ್ಪಳ ವಿಶ್ವವಿದ್ಯಾಲಯವನ್ನೂ ಉಳಿಸಬೇಕು” ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ಪದ್ಮಜಾ ನಾಗಾಲಾಪೂರಮಠ ಮಾತನಾಡಿ, “ಕೇವಲ ಒಂದು ವರ್ಷದಲ್ಲಿ ಆರಂಭವಾದ ವಿಶ್ವವಿದ್ಯಾಲಯವನ್ನು ಮುಚ್ಚುವ ಹಂತಕ್ಕೆ ತಂದಿರುವುದು ದುರದೃಷ್ಟಕರ. ಈ ಸರ್ಕಾರಕ್ಕೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೊಡುವ ಇಚ್ಚೆ ಇಲವೆ? ಕಲ್ಯಾಣ ಕರ್ನಾಟಕಕ್ಕೆ ಈ ಸರ್ಕಾರದ ಕೊಡುಗೆ ಏನಿದೆ? ಕೊಪ್ಪಳ ವಿಶ್ವವಿದ್ಯಾಲಯ ಮೂಲ ಸೌಕರ್ಯಗಳ ಕೊರತೆಯಿದೆ. ಈವರೆಗೂ ಸುಸಜ್ಜಿತವಾದ ಕಟ್ಟಡಗಳಿಲ್ಲ. ಇಲ್ಲಿಯ ವಿಶ್ವವಿದ್ಯಾಲಯ ಮುಚ್ವಿದರೆ ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಅಷ್ಟು ದೂರವಾಗಿರುವ ಬಳ್ಳಾರಿಗೆ ಹೋಗಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವೆ? ಇದರಿಂದ ಹೆಣ್ಣುಮಕ್ಕಳ ಉನ್ನತ ಶಿಕ್ಷಣದ ಕನಸು ಕಮರುವುದಿಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಅಕ್ಕಮಹಾದೇವಿ ಪೋಲೀಸ್ ಪಾಟೀಲ್ ಮಾತನಾಡಿ, “ಕೊಪ್ಪಳ ವಿಶ್ವವಿದ್ಯಾಲಯವೆಂದರೆ ಬಡವರ ವಿಶ್ವವಿದ್ಯಾಲಯವಾಗಿದೆ. ಸರ್ಕಾರ ಇಂತಹ ವಿದ್ಯಾಲಯ ಮುಚ್ಚಲು ಹೊರಟಿರುವುದನ್ನು ನೋಡಿದರೆ ಬಡವರ ಮತ್ತು ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಉನ್ನತ ಶಿಕ್ಷಣದ ವಿರೋಧಿಯಾಗಿದೆ ಎಂಬುದು ಮೇಲ್ನೋಟಕ್ಕೆ ತೋರುತ್ತಿದೆ. ಈ ವಿಶ್ವವಿದ್ಯಾಲಯ ಮುಚ್ಚಿದರೆ ಹೆಣ್ಣುಮಕ್ಕಳ ಉನ್ನತ ಶಿಕ್ಷಣದ ಕನಸನ್ನೇ ಚಿವುಟಿ ಹಾಕಿದಂತೆ” ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಗತಿಪರ ಹೋರಾಟಗಾರ ಕೆ ಬಿ ಗೋನಾಳ ಮಾತನಾಡಿ, “ಹಿಂದಿನ ಬಿಜೆಪಿ ಸರ್ಕಾರ ಸ್ಥಾಪಿಸಿದ ವಿಶ್ವವಿದ್ಯಾಲಯಗಳನ್ನು ಮುಂದುವರೆಸಿಕೊಂಡು ಹೋಗದೆ ಇರುವುದು ವಿಷಾದನೀಯ. ಯುಜಿಸಿ ಪ್ರಕಾರ ಎರಡು ಜಿಲ್ಲೆಗೆ ಒಂದರಂತೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಹೆಚ್ಚಿನ ಉನ್ನತ ಶಿಕ್ಷಣವನ್ನು ಕೆಳಹಂತಕ್ಕೆ ಒಯ್ಯಬೇಕೆಂಬ ಆಶಯಕ್ಕೆ ನಿಮ್ಮ ಈ ನಡೆ ವಿರೋಧವಾಗಿದೆ. ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾಗಿದೆ. ಆ ಕಾರಣಕ್ಕಾಗಿ ನಂಜುಂಡಪ್ಪ ವರದಿ ಜಾರಿಯಾಯಿತು. ಸಂವಿಧಾನದ 371(ಜೆ)ನೇ ಕಲಂ ಕೂಡ ಜಾರಿಯಾಯಿತು. ಕಲ್ಯಾಣ ಕರ್ನಾಟಕದ ಬೀದರ್ ವಿಶ್ವವಿದ್ಯಾಲಯ ಉಳಿಸಿಕೊಂಡಂತೆ, ಶೈಕ್ಷಣಿಕವಾಗಿ ತೀರ ಹಿಂದುಳಿದ ಪ್ರದೇಶವಾದ ಕೊಪ್ಪಳದಲ್ಲಿ ಅಪರೂಪಕ್ಕೆ ಸ್ಥಾಪನೆಯಾದ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಕಾಡಾನೆ ದಾಳಿಗೆ ಮಹಿಳೆ ಬಲಿ; ಮೃತರ ಕುಟುಂಬಸ್ಥರಿಗೆ ಬೆಳಗಾಮಿ ಡಾ. ಮೊಹಮ್ಮದ್ ಸಾದ್ ಸಾಂತ್ವನ
ಸಾಹಿತಿ ಬಸವರಾಜ ಶೀಲವಂತರ ಮಾತನಾಡಿ, “ಇತ್ತೀಚಿಗೆ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಜನರು ನಿಮ್ಮ ಪಕ್ಷದ 5 ಸಂಸದರನ್ನು ಗೆಲ್ಲಿಸಿದ ವಿಷಯವನ್ನು ಮರೆತುಬಿಟ್ಟಿರುವಿರೇ” ಎಂದರು.
“ಬೀದರ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಶುಲ್ಕದಿಂದಲೇ ನಡೆದು ಉಳಿದುಕೊಂಡಿರುವಂತೆ ಕೊಪ್ಪಳದ ವಿಶ್ವವಿದ್ಯಾಲಯವೂ ವಿದ್ಯಾರ್ಥಿಗಳ ಶುಲ್ಕದ ಬೆಂಬಲದಿಂದಲೇ ನಡೆಯುತ್ತಿದೆ. ಕನ್ನಡದ ಶಾಲೆಗಳನ್ನು ಮುಚ್ಚುತ್ತ ಬಂದ ಸರ್ಕಾರ ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿರುವುದು ನಾಚಿಕೆಗೇಡಿನ ಸಂಗತಿ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ನೆರವು ನೀಡಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ. ಸರ್ಕಾರವು ಶಿಕ್ಷಣವನ್ನು ಆರ್ಥಿಕ ಮತ್ತು ಲಾಭದ ದೃಷ್ಟಿಯಿಂದ ನೋಡಬಾರದು. ಹಣಕಾಸಿನ ತೊಂದರೆಯನ್ನು ಮುಂದೆ ಮಾಡಬಾರದು. ಶೈಕ್ಷಣಿಕ ಕ್ಷೇತ್ರವನ್ನು ಸೇವಾ ದೃಷ್ಟಿಯಿಂದ ನೋಡಬೇಕು. ಶೈಕ್ಷಣಿಕ ವಿಷಯದಲ್ಲಿ ವ್ಯಾವಹಾರಿಕ ದೃಷ್ಟಿ ಸಲ್ಲದು, ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕಂತೂ ಈ ವಿಚಾರ ಅಪ್ರಸ್ತುತ. ಹಣಕಾಸಿನ ಕೊರತೆ ಕಂಡುಬಂದ ವಿಶ್ವವಿದ್ಯಾಲಯಗಳಿಗೆ ವಿಶೇಷ ಆರ್ಥಿಕ ನೆರವು ನೀಡಿ. ನೀವು ಹೀಗೆ ಮಾಡದಿದ್ದರೆ ನಿಮ್ಮ ಸಾಮಾಜಿಕ ಸಮಾನತೆಯ ಮಾತುಗಳಿಗೆ ಬೆಲೆ ಇಲ್ಲವಾಗುತ್ತದೆ” ಎಂದು ಹೇಳಿದರು.