ಕೊಪ್ಪಳದ ರೈಲ್ವೆ ನಿಲ್ದಾಣಕ್ಕೆ ದೇವನಾಂಪ್ರಿಯ ಅಶೋಕ ಹಾಗೂ ಗಂಡುಗಲಿ ಕುಮಾರರಾಮ ಅವರ ಹೆಸರಿಡಬೇಕು ಎಂದು ಪ್ರಗತಿಪರ ಚಿಂತಕರು, ಹೋರಾಟಗಾರರು ಒತ್ತಾಯಿಸಿದರು.
ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ರೈಲ್ವೆ ನಿಲ್ದಾಣಕ್ಕೆ ಹೆಸರಿಡುವುದಕ್ಕೆ ಸಂಬಂಧಪಟ್ಟಂತೆ ನಡೆದ ಸಭೆಯಲ್ಲಿ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ “ಅಶೋಕ ಹಾಗೂ ಗಂಡುಗಲಿ ಕುಮಾರರಾಮ” ಹೆಸರಿಡಬೇಕು ಎಂದು ಎಲ್ಲರೂ ಒಪ್ಪಿಗೆ ನೀಡಿದರು.
ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಸಭೆ ಉದ್ದೇಶಿಸಿ ಮಾತನಾಡಿ, “ಕೊಪ್ಪಳ ಜಿಲ್ಲೆಗೆ ಹತ್ತಾರು ರಾಜರು ಆಳ್ವಿಕೆ ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಅಶೋಕ ಹಾಗೂ ಗಂಡುಗಲಿ ಕುಮಾರರಾಮ ಹೆಚ್ಚು ಕಾಲ ಆಳಿದವರು. ಅಲ್ಲದೆ ಅಶೋಕನ ಶಾಸನಗಳು ಪತ್ತೆಯಾಗಿದ್ದು, ಅಶೋಕನ ನಾಡು ಎಂದು ಕರೆಯುತ್ತಾರೆ. ಈ ನೆಲವು ಧಾರ್ಮಿಕ ಸಂತರ ಹೆಸರು ಹಾಗೂ ಐತಿಹಾಸಿಕ ಹಿನ್ನಲೆ ಇರುವುದರಿಂದ ರೈಲ್ವೆ ನಿಲ್ದಾಣಕ್ಕೆ ಹೆಸರಿರಬೇಕು ಅಶೋಕ, ಕುಮಾರರಾಮ ಅವರ ಹೆಸರಿಡಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ” ಎಂದರು.
“ಕೊಪ್ಪಳದಲ್ಲಿ ಅಶೋಕನ ಎರಡು ಶಾಸನಗಳಿದ್ದು, ಒಂದು ಗವಿಮಠ ಶಾಸನ ಮತ್ತು ಪಾಲ್ಕಿಗುಂಡು ಶಾಸನ ಕೊಪ್ಪಳದ ಇತಿಹಾಸ ಕುರಿತು ಹೇಳುತ್ತವೆ ಮತ್ತು ಸಾಮ್ರಾಟ ಅಶೋಕನ ಇತಿಹಾಸವನ್ನು ಸಾರುತ್ತವೆ” ಎಂದರು.
“ಚಕ್ರವರ್ತಿ ಸಾಮ್ರಾಟ ಅಶೋಕನು ಯುದ್ಧವನ್ನು ತಿರಸ್ಕರಿಸಿ ಬುದ್ಧನಿಗೆ ಶರಣಾಗಿ ಶಾಂತಿಪ್ರಿಯನಾದ. ಹಾಗಾಗಿ ಅವನ ಹೆಸರನ್ನು ಕೊಪ್ಪಳದ ರೈಲ್ವೆ ನಿಲ್ದಾಣಕ್ಕೆ ಇಡುವುದು ಸೂಕ್ತ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಗನವಾಡಿ ನೇಮಕಾತಿಯಲ್ಲಿ ಅನ್ಯಾಯ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಬಸವರಾಜ್ ಶೀಲವಂತ ಮಾತನಾಡಿ, “ವೀರ ಸಾಂಸ್ಕೃತಿಕ ನಾಯಕ ಗಂಡುಗಲಿ ಕುಮಾರರಾಮ ಪರನಾರಿ ಸಹೋದರನೆಂದು ಹೆಸರುವಾಸಿಯಾದ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತನಾಗಿದ್ದಾನೆ. ಹಾಗಾಗಿ ರೈಲ್ವೆ ನಿಲ್ದಾಣಕ್ಕೆ ಈ ಐತಿಹಾಸಿಕ ನಾಯಕನ ಹೆಸರನ್ನೂ ಕೂಡ ಇಡಬಹುದು” ಎಂದರು.
ಸಭೆಯಲ್ಲಿ, ಬಸವರಾಜ, ಅಂದಾನಪ್ಪ ಬೆಣಕಲ್ಲ, ಶೀಲವಂತರ, ಕಾಶಪ್ಪ ಛಲವಾದಿ, ಮಂಜುನಾಥ ದೊಡ್ಡಮನಿ, ಮಾರ್ಕಂಡೇಶ್ವರ ಬೆಲ್ಲದ, ಸಂಜಯದಾಸ ಬೇಣಗೇರಿ, ಕೊಪ್ಪಳದ ಪ್ರಗತಿಪರರು, ವೈಚಾರಿಕ ಚಿಂತಕರು ಸೇರಿದಂತೆ ಇತರರು ಇದ್ದರು.
