ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕೊಪ್ಪಳ ಹಾಗೂ ಸಂಯುಕ್ತ ಹೋರಾಟ–ಕರ್ನಾಟಕ ಜಿಲ್ಲಾ ಸಮಿತಿಯಿಂದ ಕೇಂದ್ರ ಸರ್ಕಾರವು ಜಾರಿ ಮಾಡಿರುವ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕೊಪ್ಪಳದಲ್ಲಿ ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರ ಜಾರಿ ಮಾಡಿರುವ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳ ರದ್ದತಿಗೆ ಒತ್ತಾಯಿಸಿ ಬುಧವಾರ ಕೊಪ್ಪಳದಲ್ಲಿ ಜೆಸಿಟಿಯು ಹಾಗೂ ಎಸ್‌ಕೆಎಂ ವತಿಯಿಂದ ನಗರದ ಕಾವ್ಯಾನಂದ ಪಾರ್ಕಿನಿಂದ ಮೆರವಣಿಗೆ ಹೊರಟು ಅಶೋಕ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸುತ್ತಿದ್ದ ವೇಳೆ ಕಾರ್ಮಿಕ ಮುಖಂಡರನ್ನು ವಶಕ್ಕೆ ಪಡೆದರು.
ಕಾರ್ಮಿಕ ಮುಖಂಡರು ಮಾತನಾಡಿ ಸಂಪತ್ತನ್ನು ಸೃಷ್ಟಿಸುವ ಶ್ರಮಜೀವಿಗಳನ್ನು ಶಾಶ್ವತವಾಗಿ ಗುಲಾಮರನ್ನಾಗಿಸುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಬೇಕು. ಕರ್ನಾಟಕ ಸರ್ಕಾರ ಈ ಸಂಹಿತೆಗಳನ್ನು ತಿರಸ್ಕರಿಸಬೇಕು. ಕನಿಷ್ಠ ವೇತನವನ್ನು ಅಂತಿಮಗೊಳಿಸಬೇಕು. ಯಾವುದೇ ರೀತಿಯ ಜಮೀನು ಭೂಸ್ವಾಧೀನ ಮಾಡಬಾರದುʼ ಎಂದು
ಒತ್ತಾಯಿಸಿದರು.
ʼಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಲು ವೇತನ ಸಂಹಿತೆಯಲ್ಲಿ ನಾಲ್ಕು ಕಾನೂನು, ಕೈಗಾರಿಕಾ ಬಾಂಧವ್ಯ ಸಂಹಿತೆಯಲ್ಲಿ 3 ಕಾನೂನು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯಲ್ಲಿ 13 ಕಾನೂನು ಹಾಗೂ ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ 9 ಕಾನೂನು ಸೇರಿದಂತೆ ಒಟ್ಟು 29 ಕಾನೂನುಗಳನ್ನು 4 ಸಂಹಿತೆಗಳಲ್ಲಿ ಜಾರಿಗೆ ತರಲಾಗುತ್ತದೆ. ಉನ್ನತಿಗೆ ಗಣಿಗಾರಿಕೆ ಲಾಭದ ಶೇ.50 ಪಾಲು ಬಳಕೆ ಖಾತ್ರಿಗೊಳಿಸಲು ಖನಿಜ ಮತ್ತು ಲೋಹಗಳ ಗಣಿಗಾರಿಕೆಯ ಕಾನೂನಿಗೆ ತಿದ್ದುಪಡಿ ಮಾಡಬೇಕುʼ ಎಂದರು.
ʼವಿದ್ಯುತ್ ತಿದ್ದುಪಡಿ ಮಸೂದೆ-2022 ವಾಪಸ್ಸು ಪಡೆಯಬೇಕು. ವಿದ್ಯುತ್ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು. ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಅನುಪಾತದಲ್ಲಿ ಬೆಂಬಲ ಬೆಲೆ ಖಾತರಿಗೆ ಕಾನೂನು ರೂಪಿಸಬೇಕು. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ವಿದ್ಯುತ್ ಮೇಲಿನ ಸಬ್ಸಿಡಿ ಹೆಚ್ಚಿಸಬೇಕು. ಸಮಗ್ರ ಸಾಲ ಮನ್ನಾ ಮತ್ತು ಬೆಳೆ ವಿಮೆ ಯೋಜನೆಗಳನ್ನು ಜಾರಿಗೆ ತರಬೇಕು. ಸಂಯುಕ್ತ ಕಿಸಾನ್ ಮೋರ್ಚಾಗೆ ನೀಡಿದ ಲಿಖಿತ ಭರವಸೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕುʼ ಎಂದು ಆಗ್ರಹಿಸಿದರು.
ʼಅರಣ್ಯ ನಿವಾಸಿಗಳನ್ನು ತೆರವುಗೊಳಿಸಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡುವ ತಿದ್ದುಪಡಿಗಳನ್ನು ವಾಪಸ್ಸು ಪಡೆಯಬೇಕು.ಇ-ಶ್ರಮ್ ಪೋರ್ಟಲ್‌ನಲ್ಲಿ ನೊಂದಾಯಿಸಿದ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಯೋಜನೆಗಳು, ಹೆರಿಗೆ ಸೌಲಭ್ಯಗಳು, ಜೀವ ಮತ್ತು ಅಂಗವೈಕಲ್ಯ ವಿಮೆ ನೀಡಬೇಕು ಹಾಗೂ ಇಎಸ್‌ಐ ಸೌಲಭ್ಯ ಸೇರಿದಂತೆ ಸಾಮಾಜಿಕ ಸುರಕ್ಷತೆ ಒದಗಿಸಬೇಕು. ಕಲ್ಯಾಣ ಮಂಡಳಿಗಳಿಗೆ ಬಜೆಟ್‌ನಲ್ಲಿ ಅನುದಾನ ನೀಡಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಸರ್ಕಾರದ 2 ವರ್ಷಗಳ ಸಾಧನೆಯ ಪ್ರದರ್ಶನಕ್ಕೆ ಚಾಲನೆ: ಗಮನ ಸೆಳೆಯುವ ಸಿಎಂ ಸಿದ್ದರಾಮಯ್ಯ ಸೆಲ್ಫಿ ಪಾಯಿಂಟ್ !
ಗಾಳೆಪ್ಪ ಮುಂಗೋಲಿ, ಹನುಮೇಶ ಕಲ್ಮಂಗಿ, ಸುಂಕಪ್ಪ ಗದಗ್, ರಾಜು ಮುನಿರಾಬಾದ್, ಅಮರೇಶ್ ಡಾಣಿ, ಮಖಬೂಲ್ ರಾಯಚೂರು, ಅನ್ನಪೂರ್ಣ ಬೃಹನ್ಮಠ, ಶಿವಲೀಲಾ ಅಗಳಕೇರಾ, ಸಂಜಯ್ ದಾಸ್ ಕೌಜಗೇರಿ, ಬಸವರಾಜ್ ಕಂಠಿ, ಕರೀಮ್ ಪಾಶಾ ಗಚ್ಚಿನಮನಿ, ಮಲ್ಲಿಕಾರ್ಜುನ್ ಬೃಂಗಿ, ಕೊಟ್ರಮ್ಮ ಕೇಸಲಾಪುರ, ಸೈಯ್ಯದ್ ಅಬ್ದುಲ್ ಖಾದರ್ ಪೀರಝಾದೆ, ಜಿ.ಪಿ.ವಿಜಯ ಭಾಸ್ಕರ್ ರೆಡ್ಡಿ, ಬಸವರಾಜ, ಅಂಜಮ್ಮ, ಮಲ್ಲಮ್ಮ ಬಿಸರಹಳ್ಳಿ, ಜಾಫರ್ ಕುರಿ, ಶಾಬುದ್ದೀನ್ ಜವಳಗೇರಾ, ಮಂಗಳೇಶ್ ರಾಥೋಡ್ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರಿದ್ದರು.