ಕೊಪ್ಪಳದ ಬಲ್ಡೋಟ ಬಿಎಸ್‌ಪಿಎಲ್ ಕಂಪನಿಯ ಸ್ಪಾಂಜ್ ಐರನ್ ಮತ್ತು ಉಕ್ಕು ತಯಾರಿಕಾ ಘಟಕ ವಿಸ್ತರಣೆಯ ವಿರುದ್ಧ ಜನಾಕ್ರೋಶ ತೀವ್ರವಾಗಿದೆ. ಈ ಹಿನ್ನೆಲೆ ಕಂಪನಿಗೆ ನೀಡಿರುವ ಅನುಮತಿಯನ್ನು ಶಾಶ್ವತವಾಗಿ ಹಿಂಪಡೆಯುವಂತೆ ಆಗ್ರಹಿಸಿ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಮಾನವ ಸರಪಳಿ ಹಮ್ಮಿಕೊಂಡಿತ್ತು.
“ನಗರಕ್ಕೆ ಹೊಂದಿಕೊಂಡ ಬಲ್ಡೋಟಾ ಬಿಎಸ್‌ಪಿಎಲ್ ಕಾರ್ಖಾನೆ ವಿಸ್ತರಣೆಯ ಅನುಮತಿಯನ್ನು ಶಾಶ್ವತವಾಗಿ ಕೈಬಿಡಬೇಕು. ಈ ಕಾರ್ಖಾನೆಗಳು ತಾಲೂಕಿನ ಗಿಣಿಗೇರಿ, ಕನಕಾಪುರ, ಅಲ್ಲಾನಗರ, ಬಸಾಪುರ, ಬೇವಿನಹಳ್ಳಿ, ಹಿರೇಬಗನಾಳ, ಚಿಕ್ಕಬಗನಾಳ ಸೇರಿದಂತೆ ಸುಮಾರು 20 ಗ್ರಾಮಗಳ ಜನರ ಜೀವ, ಜೀವನ, ಆರೋಗ್ಯ, ಕೃಷಿ ಬೆಳೆ ಎಲ್ಲವನ್ನೂ ಹಾನಿ ಮಾಡಿವೆ. ಜಾನುವಾರುಗಳ ಸಾವಿಗೆ ಕಾರಣವಾಗಿ, ಭೂಮಿ ಫಲವತ್ತತೆ ಹಾಳು ಮಾಡಿದೆ. ಅಂತರ್ಜಲ ವಿಷಗೊಳಿಸಿದ ಎಲ್ಲಾ ಸ್ಪಾಂಜ್ ಐರನ್, ಉಕ್ಕು, ರಸಾಯನ ಗೊಬ್ಬರ, ಸಿಮೆಂಟ್ ಸುಣ್ಣ ತಯಾರಿಸುವ ಕಾರ್ಖಾನೆಗಳನ್ನು ಬಂದ್ ಮಾಡಬೇಕು. ಕೂಡಲೇ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮೂಲಕ ಅಲ್ಲಿನ ಜನರ ಆರೋಗ್ಯ ತಪಾಸಣೆ ಕೈಕೊಳ್ಳಬೇಕು” ಎಂದು ಒತ್ತಾಯಿಸಲಾಯಿತು.

“ಬಸಾಪುರ ಗ್ರಾಮ ಸ.ನಂ:143ರ 44.35 ಎಕರೆ ಸಾರ್ವಜನಿಕ ಕೆರೆಯನ್ನು ಎಂಎಸ್‌ಪಿಎಲ್ ಕಂಪನಿ ಕಬಳಿಸಿ ಕಾಂಪೌಂಡ್ ಕಟ್ಟಿಕೊಂಡು ರಸ್ತೆ ಬಂದ್ ಮಾಡಿದ್ದನ್ನು ತೆರವುಗೊಳಿಸಬೇಕು. ತುಂಗಭದ್ರಾ ಜಲಾಶಯಕ್ಕೆ ತ್ಯಾಜ್ಯ ಬಿಟ್ಟು ನೀರು ವಿಷಗೊಳಿಸುವ ಎಲ್ಲಾ ಕಾರ್ಖಾನೆಗಳನ್ನು ಬಂದ್ ಮಾಡಬೇಕು. ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿದ್ಯುತ್ ಪರಮಾಣು ಸ್ಥಾವರವನ್ನು ಸಂಪೂರ್ಣವಾಗಿ ಕೈಬಿಡಬೇಕು ಹಾಗೂ ಪರಿಸರ ಸ್ನೇಹಿ ಪಾವಗಡ ಮಾದರಿಯ ಸೌರ ವಿದ್ಯುತ್ ಘಟಕ ಸ್ಥಾಪಿಸಬೇಕು” ಎಂದು ಕಾರ್ಖಾನೆಗಳ ಬಾಧಿತ ಜನರ ಮಾನವ ಸರಪಳಿ ಜನಾಂದೋಲನ ಆಗ್ರಹಿಸಿತು.
“2010ರಿಂದ ಸ್ಪಾಂಜ್ ಐರನ್ ಉತ್ಪಾದಿಸಲು ಮುಂದಾದ ಎಂಎಸ್‌ಪಿಎಲ್, ಕಳೆದ 13 ವರ್ಷಗಳಲ್ಲಿ ಕೊಪ್ಪಳದ ಒಂದೂವರೆ ಲಕ್ಷ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಿದೆ. ಇದರಲ್ಲಿ ಜಿಲ್ಲಾಡಳಿತ ಭವನ, ಜಿಲ್ಲಾ ಆಸ್ಪತ್ರೆ, ಕಿಮ್ಸ್ ಮೆಡಿಕಲ್ ಕಾಲೇಜು, ಹೊಸ ಮತ್ತು ಹಳೆ ಎಪಿಎಂಸಿ, ಜಿಲ್ಲಾ ಸತ್ರ ನ್ಯಾಯಾಲಯ, ಮಾರುಕಟ್ಟೆ ಏರಿಯಾಗಳು ಕಂಪನಿ ಹೊರ ಸೂಸುವ ಕಪ್ಪು ಧೂಳು ಮತ್ತು ಹೊಗೆಯಿಂದ ಬಾಧಿತವಾಗಿವೆ. ಇಲ್ಲಿನ ಜನರ ಉಸಿರಾಟದ ಮೇಲೆ ಗಂಭೀರ ಪರಿಣಾಮ ಉಂಟಾಗಿದ್ದು, ರೋಗ ರುಜಿನಗಳಿಗೆ ಒಳಗಾಗುತ್ತಿದ್ದಾರೆ. ನಗರದಲ್ಲಿ ಕಾರ್ಖಾನೆ ಬರುವ ಮುಂಚೆ ಕೇವಲ ನಾಲ್ಕು ಎಮ್‌ಬಿಬಿಎಸ್ ವೈದ್ಯರಿದ್ದರು. ಆದರೆ, 10ವರ್ಷಗಳಲ್ಲಿ ನೂರಾರು ನಕಲಿ ವೈದ್ಯರ ಆಸ್ಪತ್ರೆಗಳು ನಾಯಿಕೊಡೆಯಂತೆ ಹುಟ್ಟಿಕೊಂಡಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೊಪ್ಪಳ | ಮಕ್ಕಳ ಪ್ರತಿಭೆಗಳಿಗೆ ಶಕ್ತಿ ತುಂಬುವ ಕೆಲಸ ಹೆಚ್ಚಾಗಲಿ: ಸಚಿವ ಶಿವರಾಜ ತಂಗಡಗಿ
“ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರ ಅತೀ ಜರೂರಾಗಿ ಇಲ್ಲಿನ ಬಾಧಿತ ಜನರ ಕಾಳಜಿ ಮಾಡಬೇಕಿದೆ. ಮಾಲಿನ್ಯಕ್ಕೆ ಕಾರಣವಾದ ಕಾರ್ಖಾನೆಗಳನ್ನು ಮುಚ್ಚುವ ತೀರ್ಮಾನ ಕೈಗೊಳ್ಳಬೇಕು. ಹೊರ ರಾಜ್ಯಗಳಾದ ಬಿಹಾರ, ಜಾರ್ಖಂಡ್, ಒರಿಸ್ಸಾ ಕಾರ್ಮಿಕರು ಕಾರ್ಖಾನೆಯ ಅಪಾಯಕಾರಿ ಕೆಲಸದಲ್ಲಿ ತೊಡಗಿ ಸಾಯುತ್ತಿದ್ದು, ವಲಸೆ ಕಾರ್ಮಿಕರ ಸಮೀಕ್ಷೆ ನಡೆಸಬೇಕು ಮತ್ತು ಸಾವಿನ ಪ್ರಕರಣಗಳ ಮೇಲೆ ತನಿಖೆ ನಡೆಸಬೇಕು” ಎಂದು ಸಮಿತಿ ಒತ್ತಾಯಿಸಿತು.
