ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸಪೇಟೆ-ಬಳ್ಳಾರಿ ಮಾರ್ಗದಲ್ಲಿ ರೈಲು ಸೌಲಭ್ಯಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಮಹೇಶ್ವರಸ್ವಾಮಿ ಕೆ ಎಂ ಮತ್ತು ಗಂಗಾವತಿ ಶಾಸಕ ಜಿ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ನೇತೃತ್ವದಲ್ಲಿ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿತು.
ಕೊಪ್ಪಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರ್‌ಒಬಿ ಉದ್ಘಾಟನೆ ಸಂದರ್ಭದಲ್ಲಿ ಸಚಿವರಿಗೆ ಮನವಿ ಸಲ್ಲಿಸಿ, “10-15 ವರ್ಷಗಳಿಂದ ನೀಡಿದ ಅರ್ಜಿಗಳು ಫಲಿತಾಂಶಗಳನ್ನು ನೀಡಿಲ್ಲ. ಒಂದು ತಿಂಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ಬಳ್ಳಾರಿಯಿಂದ ಹುಬ್ಬಳ್ಳಿವರೆಗೆ ಪಾದಯಾತ್ರೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿ-ಮಂಗಳೂರು ಮತ್ತು ಶಿವಮೊಗ್ಗ-ಬಳ್ಳಾರಿ-ಚೆನ್ನೈ ರೈಲು ಸೇವೆಗಳನ್ನು ಪುನರಾರಂಭಿಸುವುದು, ಕೊಪ್ಪಳ-ಬಳ್ಳಾರಿ-ಗುಂತಕಲ್ ಮಾರ್ಗದಲ್ಲಿ ಇಂಟರ್‌ಸಿಟಿ ಅಥವಾ ವಂದೇ ಭಾರತ್ ಸೇವೆಯನ್ನು ಪರಿಚಯಿಸುವುದು, ಕೊಪ್ಪಳ, ಹೊಸಪೇಟೆ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ವಿಜಯಪುರ-ಮಂಗಳೂರು ಸೇವೆಯನ್ನು ಗದಗ-ಬಳ್ಳಾರಿ-ಚಿತ್ರದುರ್ಗ-ಚಿಕ್ಕಜಾಜೂರು ಲಿಂಕ್ ಎಕ್ಸ್‌ಪ್ರೆಸ್‌ಗೆ ಮಾರ್ಪಡಿಸಬೇಕು” ಎಂದು ಸಮಿತಿಯ ಕಾರ್ಯಕರ್ತರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಮತ್ತೆ ಮಂಗನ ಕಾಯಿಲೆ ಆತಂಕ; ಹೈ-ಅಲರ್ಟ್ ಘೋಷಣೆ
“ಮುಂಬೈ-ಹೊಸಪೇಟೆ ರೈಲು ಸೇವೆಯನ್ನು ಬಳ್ಳಾರಿವರೆಗೆ ವಿಸ್ತರಿಸಬೇಕು. ನಂತರದ ದಿನಗಳಲ್ಲಿ ಬೆಂಗಳೂರು ಅಥವಾ ಮೈಸೂರು ರೈಲು ನಿಲ್ದಾಣಗಳ ವರೆಗೆ ವಿಸ್ತರಿಸಬೇಕು” ಎಂದು ಆಗ್ರಹಿಸಿದರು.