ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಎಸಗಿ, ಅಪಹರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿ ಕೊಪ್ಪಳದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದಾರೆ.
ತೋಪಲಕಟ್ಟಿ ಗ್ರಾಮದ ಮಹಾಂತೇಶ ಭೀಮಪ್ಪ ಟಕ್ಕಳಕಿ ಎಂಬುವವನು ಹಾಗೂ ಅದೇ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿ ಅಕ್ಕಪಕ್ಕದ ಮನೆಯವರಾಗಿದ್ದು, ಸಲುಗೆಯಿಂದಿದ್ದು, ಪ್ರೀತಿಸಿ ವಿವಾಹವಾಗುವುದಾಗಿ ಹೇಳುತ್ತಾ ಹಿಂಬಾಲಿಸುತ್ತಿದ್ದನು. ಜೂನ್ 20, 2021ರ ಮಧ್ಯಾಹ್ನ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಯ ಹಿಂದಿನ ಶೆಡ್ಡಿಗೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ಪುಸಲಾಯಿಸಿ ಅತ್ಯಾಚಾರ ಎಸಗಿದ್ದಲ್ಲದೇ, ನಂತರದಲ್ಲಿ ಕೂಡ ಅತ್ಯಾಚಾರ ಎಸಗಿದ್ದನು.
ಜೂನ್ 5-2023 ರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬಾಲಕಿ ಈಶ್ವರ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಸಂದರ್ಭದಲ್ಲಿ ಆರೋಪಿ, ಟಾಟಾಏಸಿ ವಾಹನ ತಂದು ಅದರಲ್ಲಿ ಕೂಡಿಸಿಕೊಂಡು ಕುಷ್ಟಗಿಯ ಅನ್ನಪೂರ್ಣ ದೇವಸ್ಥಾನಕ್ಕೆ ಹೋಗಿದ್ದಲ್ಲದೇ, ಬಾಲಕಿ ಅಪ್ರಾಪ್ತಳು ಎಂದು ಗೊತ್ತಿದ್ದರೂ ಅವಳಿಗೆ ತಾಳಿ ಕಟ್ಟಿ ಬಾಲ್ಯ ವಿವಾಹ ಮಾಡಿಕೊಂಡಿದ್ದ. ಈ ಆರೋಪದ ಹಿನ್ನೆಲೆಯಲ್ಲಿ ಕುಷ್ಟಗಿ ಪೊಲೀಸ್ ಠಾಣೆಯ ಪಿ.ಎಸ್.ಐ ಮೌನೇಶ ರಾಠೋಡ ಇವರು ದೂರು ದಾಖಲಿಸಿಕೊಂಡು ಪ್ರಥಮ ಹಂತದ ತನಿಖೆಯನ್ನು ನಡೆಸಿದ್ದರು.
ಮುಂದಿನ ತನಿಖೆಯನ್ನು ಕುಷ್ಟಗಿ ಸಿಪಿಐ ನಿಂಗಪ್ಪ ಎನ್.ಆರ್ ಇವರು ನಿರ್ವಹಿಸಿದ್ದು ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು ಪೋಕ್ಸೊ ಸಂ: 39/2023ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿ ಮಹಾಂತೇಶ ಭೀಮಪ್ಪ ಟಕ್ಕಳಕಿ ಇತನ ಮೇಲಿನ ಆರೋಪಣೆಗಳು ಸಾಬೀತಾಗಿವೆ.
ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ರೂ. 20,000 ದಂಡವನ್ನು ಭರಿಸುವಂತೆ ಆದೇಶಿಸಿ ಕೊಪ್ಪಳದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ, ತ್ವರಿತ ಪೋಕ್ಸೊ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ.ಕೆ ಇವರು ಮೇ 17 ರಂದು ತೀರ್ಪು ಹೊರಡಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಕುಷ್ಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಹನುಮೇಶ ಜಗ್ಗಲ್ ಇವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಾಕಷ್ಟು ಸಹಕರಿಸಿರುತ್ತಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.