ಆರೆಸ್ಸೆಸ್ ಮತ್ತು ಬಿಜೆಪಿಗರು ಸಂವಿಧಾನ ವಿರೋಧಿ ಚಾಳಿಯನ್ನು ಬಿಡಲಿ. ಸಂಸತ್ತಿನ ಮೇಲ್ಮನೆಯಲ್ಲಿ ಅಮಿತ್ ಶಾ ತನ್ನ ನಾಲಿಗೆಯನ್ನು ಹರಿಬಿಟ್ಟಿದ್ದು, ಡಾ ಬಿ ಆರ್ ಅಂಬೇಡ್ಕರ್ ಅವರ ಹೆಸರನ್ನು ಪದೇಪದೆ ಹೇಳುವುದೊಂದು ವ್ಯಸನವಾಗಿಬಿಟ್ಟಿದೆ ಎಂದಿರುವುದು ಖಂಡನೀಯ ಎಂದು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ, ಜನ ಶಕ್ತಿ ಸಂಘಟನೆಗಳು ಬಲವಾಗಿ ವಿರೋಧಿಸಿದ್ದು, ರಾಷ್ಟ್ರಪತಿಗಳಿಗೆ ವಿವಿಧ ಹಕ್ಕೊತ್ತಾಯಗಳನ್ನು ಸಲ್ಲಿಸಿದರು.
ಕೊಪ್ಪಳ ನಗರದಲ್ಲಿ ಅಶೋಕ ಸರ್ಕಲ್‌ನಿಂದ ಬಸವೇಶ್ವರ ಸರ್ಕಲ್‌ವರೆಗೂ ಕಾಲ್ನಡಿಗೆಯಲ್ಲಿ ಪ್ರಗತಿಪರ ಸಂಘಟನೆಗಳು, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ, ಜನಶಕ್ತಿ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
“ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡನೀಯ. ಅಂಬೇಡ್ಕರ್ ವಿರೋಧಿ ಮಾತುಗಳನ್ನಾಡಿದ ಸಚಿವರನ್ನು ಈವರೆಗೂ ಸಂಪುಟದಲ್ಲೇ ಉಳಿಸಿಕೊಂಡಿರುವುದು ನರೇಂದ್ರ ಮೋದಿಯವರ ಧೋರಣೆಯ ಸೂಚಕವಾಗಿದೆ” ಎಂದು ಕರಿಯಪ್ಪ ಗುಡಿಮನಿ ಆಕ್ರೋಶ ವ್ಯಕ್ತಪಡಿಸಿದರು.

“ಬಿಜೆಪಿ ಮತ್ತು ಆರೆಸ್ಸೆಸ್ಸಿಗರು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧ ಮಾತಾಡುತ್ತಲೇ ಬಂದಿದ್ದಾರೆ. ಆರೆಸ್ಸೆಸ್ ಪ್ರತಿನಿಧಿಸುವ ಬ್ರಾಹ್ಮಣವಾದದಿಂದ ನೋವಿಗೊಳಗಾಗಿಯೇ ಬಾಬಾಸಾಹೇಬರು ‘ಹಿಂದೂವಾಗಿ ಹುಟ್ಟಿ ಹಿಂದೂವಾಗಿ ಸಾಯುವುದಿಲ್ಲ’ವೆಂದು ಘೋಷಿಸಿದ್ದರು. ಬಾಬಾಸಾಹೇಬರ ನೇತೃತ್ವದಲ್ಲಿ ಸಂವಿಧಾನ ರಚನಾ ಸಭೆಯು 1949ರ ನವೆಂಬರ್ 26ರಂದು ಸಂವಿಧಾನವನ್ನು ಬರೆದು ಮುಂದಿಟ್ಟ ನಾಲ್ಕೇ ದಿನಗಳಲ್ಲಿ ಆರೆಸ್ಸೆಸ್ ಸಂಘ ಸಂಚಾಲಕ ಗೋಲ್ವಾಲ್ಕರ್ ಅದನ್ನು ವಿರೋಧಿಸಿ ಲೇಖನ ಬರೆದಿದ್ದರು” ಎಂದು ತಿಳಿಸಿದರು.

“ಅಲ್ಲಿಂದ ಇಲ್ಲಿಯವರೆಗೆ ಗೋಲ್ವಾಲ್ಕರ್ ಹೇಳಿಕೆಯನ್ನು ಆರೆಸ್ಸೆಸ್ ಹಿಂತೆಗೆದುಕೊಂಡಿಲ್ಲ. ಇಂತಹ ಆರೆಸ್ಸಸ್ ಸಿದ್ಧಾಂತಗಳನ್ನು ಧಿಕ್ಕರಿಸುವುದಾಗಿ ಬಿಜೆಪಿ ಎಂದೂ ಹೇಳಿಲ್ಲ. ಹಾಗಾಗಿಯೇ ಬಿಜೆಪಿ, ಅದರ ನಾಯಕರ ಬಗ್ಗೆ ಎಲ್ಲ ಸಂವಿಧಾನ ಪ್ರೇಮಿಗಳಿಗೆ ಯಾವುತ್ತೂ ಅನುಮಾನವಿದೆ. ಅದನ್ನು ಇದೀಗ ಅಮಿತ್ ಶಾ ಹೇಳಿಕೆ ಬಲಪಡಿಸಿದೆ. ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ್ದರ ಹಿಂದೆ ಇರುವುದು, ಮಾನವಿತೆಯ-ಪ್ರಜಾತಂತ್ರ-ನ್ಯಾಯದ ಕುರಿತ ಅವರ ಅಸಹನೆ. ಈ ಅಸಹನೆಯನ್ನು ವ್ಯಕ್ತಪಡಿಸಿದ ಸಚಿವರ ವಿರುದ್ಧ ಪ್ರಧಾನಿಗಳು ಕ್ರಮ ತೆಗೆದುಕೊಳ್ಳುತ್ತಾರೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಈವರೆಗೆ ಅಂತಹ ಕ್ರಮವಾಗಿಲ್ಲ. ಬುದ್ಧವಿಹಾರಗಳ ಮೇಲೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಿ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕಡ್ಡಾಯವಾಗಿ ಕ್ರಮ ಕೈಗೊಳ್ಳಬೇಕು” ಎಂದು ಸಾಹಿತಿ, ಪ್ರಗತಿಪರ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಒತ್ತಾಯಿಸಿದರು.

“ಪ್ರಧಾನಿ ನರೇಂದ್ರ ಮೋದಿಯವರು ಗೃಹಸಚಿವ ಅಮಿತ್ ಶಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾ ಮಾಡಬೇಕು. ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿರುವ ಗೋಲ್ವಾಲ್ಕರ್ ಅವರ ಲೇಖನವನ್ನು ಆರೆಸ್ಸೆಸ್ ಮುಖಪತ್ರಿಕೆ ‘ಆರ್ಗನೈಸರ್’ನಿಂದ ಹಿಂಪಡೆದಿದ್ದೇವೆಂದು ಆರೆಸ್ಸೆಸ್ ಘೋಷಿಸಬೇಕು. ಇಲ್ಲವಾದರೆ, ಬಿಜೆಪಿಯು ಆರೆಸ್ಸಸ್ಸನ್ನು ಧಿಕ್ಕರಿಸಿ ಹೇಳಿಕೆ ನೀಡಬೇಕು. ಬುದ್ಧ ವಿಹಾರಗಳ ಮೇಲೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಿ ಕಿಡಿಗೇಡಿಗಳ ಮೇಲೆ ಕಡ್ಡಾಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ʼಭೀಮಾ ಕೋರೆಗಾಂವ್ ವಿಜಯʼ ಸ್ಮರಣೆ ನಮ್ಮೆಲ್ಲರ ಕರ್ತವ್ಯ: ಸತೀಶ್ ಅರವಿಂದ್
ಅಲ್ಲಮಪ್ರಭು ಬೆಟ್ಟದೂರ, ಕರಿಯಪ್ಪ ಗುಡಿಮನಿ, ಶರಣು ಸಂಡೂರ ಕೆವಿಎಸ್, ಬಸವರಾಜ್ ಶೀಲವಂತರ, ಮುದಕಪ್ಪ ಹೊಸಮನಿ, ಪ್ರಗತಿ ಸಿಂಧನೂರು, ಶೋಭಾ ರಾಂಪೂರ, ಲಕ್ಷ್ಮೀ, ಯಮುನಾ ಚಳ್ಳೂರು ಸಂಜಯದಾಸ ಕೌಜಗೇರ್, ಉಮ್ಮೇಶ, ದುರ್ಗೇಶ್ ಬರಗೂರ ಸೇರಿದಂತೆ ಬಹುತೇಕರು ಇದ್ದರು.