ಕೊಪ್ಪಳದ ಕುಷ್ಟಗಿ ತಾಲೂಕಿನ ಕನಕೊಪ್ಪ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಲು ಒತ್ತಾಯಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ, “ಗ್ರಾಮೀಣ ಪ್ರದೇಶಗಳಿಂದ ನೂರಾರು ವಿದ್ಯಾರ್ಥಿಗಳು ನಗರ ಪ್ರದೇಶಕ್ಕೆ ಶಿಕ್ಷಣಕ್ಕಾಗಿ ಬರುತ್ತಾರೆ. ಆದರೆ ಅವರಿಗೆ ಸಮರ್ಪಕ ಬಸ್ ವ್ಯವಸ್ಥೆಯಿಲ್ಲದೇ ದಿನನಿತ್ಯ ಪರದಾಡುವ ಸ್ಥಿತಿ ಇದೆ. ಸಮಯಕ್ಕೆ ಸರಿಯಾಗಿ ಬಸ್ ಇಲ್ಲದೇ ಶಾಲಾ ಕಾಲೇಜುಗಳಿಗೆ ತಡವಾಗಿ ಹೋಗುವುದರಿಂದ ಶಾಲಾ ಕಾಲೇಜುಗಳಲ್ಲಿ ಹಾಜರಾತಿ ಕೊರತೆಯಿಂದ ಶಿಕ್ಷಣ ಕುಂಠಿತವಾಗಿದೆ. ಎಷ್ಟೋ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸುವ ಸಂದರ್ಭ ಎದುರಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಗ್ರಾಮಕ್ಕೆ ಅಗತ್ಯ ಇರುವಷ್ಟು ಬಸ್ ವ್ಯವಸ್ಥೆ ಕಲ್ಪಿಸಬೇಕು” ಎಂದರು.
ಹೋರಾಟದ ಸ್ಥಳಕ್ಕೆ ಡಿಪೋ ವಿಸ್ತರಣಾಧಿಕಾರಿಗಳು ಮತ್ತು ಎಎಸ್ಐ ಭೇಟಿ ನೀಡಿ ಕನಕೊಪ್ಪಕ್ಕೆ ಬಸ್ ಬಿಡುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಇದನ್ನೂ ಓದಿ: ಕೊಪ್ಪಳ | ಕೊಲೆಗೆ ಯತ್ನಿಸಿದ ಆರೋಪ ಸಾಬೀತು; ಅಪರಾಧಿಗೆ 7 ವರ್ಷ ಜೈಲು
ರಾಜ್ಯ ಸಹ ಕಾರ್ಯದರ್ಶಿ ಚಂದ್ರು ರಾಠೋಡ, ಮುಖಂಡರಾದ ಅನಿಲ್, ಶರಣು, ಬಸವರಾಜ್, ಉಮೇಶ, ಮಾರ್ಕಂಡಯ್ಯ ಹಾಗೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.