ಆಶಾ ಸುಗಮಕಾರರ ಮುಂದುವರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಕೊಪ್ಪಳ ಜಿಲ್ಲಾ ಆರೋಗ್ಯ ಅಧಿಕಾರಿಗಳ ಮೂಲಕ ಅಭಿಯಾನ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ ಮಾತನಾಡಿ, “ರಾಜ್ಯದಲ್ಲಿ ಕಳೆದ 12 ವರ್ಷಗಳಿಂದ ಆಶಾ ಕಾರ್ಯಕರ್ತೆಯರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಯಿತು. ಆಶಾ ಸುಗಮಕಾರರಾಗಿ ಆಶಾ ಕಾರ್ಯಕರ್ತೆಯರ ಕ್ಷೇತ್ರಕ್ಕೆ ತೆರಳಿ ಮೇಲ್ವಿಚಾರಣೆ ಮಾಡುತ್ತ, ಆಶಾ ಕಾರ್ಯಕರ್ತೆಯರು ಸುಗಮವಾಗಿ ಕೆಲಸ ಮಾಡಲು ಮಹತ್ತರ ಪಾತ್ರವಹಿಸಿರುತ್ತಾರೆ” ಎಂದು ಹೇಳಿದರು.
“ಅಭಿಯಾನ ನಿರ್ದೇಶಕರು ಏಕಾಏಕಿ ಫೆಬ್ರವರಿ 25ರಂದು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದು, ಆಶಾ ಸುಗಮಕಾರರನ್ನು ಕೆಲಸದಿಂದ ಕೊನೆಗೊಳಿಸಿರುವುದಾಗಿ ತಿಳಿಸಿರುತ್ತಾರೆ. ಇದು ನಿಜಕ್ಕೂ 12 ವರ್ಷಗಳಿಂದ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜ್ಯದ ಎಲ್ಲ ಸುಗಮಕಾರರಿಗೆ ಆಘಾತವನ್ನುಂಟುಮಾಡಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಈವರೆಗೆ ಪ್ರತಿ 20 ಆಶಾ ಕಾರ್ಯಕರ್ತೆಯರಿಗೆ ಒಬ್ಬರಂತೆ ಕೆಲವೆಡೆ 40ರಿಂದ 50 ಆಶಾ ಕಾರ್ಯಕರ್ತರಿಗೆ ಒಬ್ಬ ಸುಗಮಕಾರರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಆಶಾ ಕಾರ್ಯಕರ್ತೆಯರು ಸುಗಮವಾಗಿ ಕೆಲಸ ಮಾಡಲು ಇಲಾಖೆಯ ಎಲ್ಲ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಜೊತೆಗೂಡಿರುತ್ತಾರೆ. ಅತ್ಯಂತ ಕಡಿಮೆ ಮಾಸಿಕ ₹6,000 ಗೌರವಧನದಲ್ಲಿ ಸುಮಾರು ತನ್ನ ಸುತ್ತಮುತ್ತಲಿನ 4 ರಿಂದ 8 ಹಳ್ಳಿಗಳಿಗೆ ಹೋಗಿ, ಅಲ್ಲಿಯ ಆಶಾಳಿಗೆ ಕಾರ್ಯನಿರ್ವಹಿಸುವ ಆಶಾ ಮೇಲ್ವಿಚಾರಣೆ ಕಾರ್ಯ ನಿರ್ವಹಿಸಿರುತ್ತಾರೆ” ಎಂದು ತಿಳಿಸಿದರು.
“ಸುಗಮಕಾರರ ಅಡಿಯಲ್ಲಿ ಬರುವ ಎಲ್ಲ ಆಶಾಗಳ ವರದಿಗಳನ್ನು ಇಲಾಖೆಗೆ ಕಾಲಕಾಲಕ್ಕೆ ನೀಡಿ, ಆಶಾ ಕಾರ್ಯಕ್ರಮದ ಯಶಸ್ಸಿನ ಜತೆಗಿರುತ್ತಾರೆ. ಈಗಾಗಲೇ ಈ ಕೆಲಸದ ಜತೆಗೆ ಪ್ರತಿ ಸುಗಮಕಾರರು ಜೀವನವನ್ನು ರೂಪಿಸಿಕೊಂಡಿದ್ದು, ಬರುತ್ತಿರುವ ಆದಾಯಕ್ಕೆ ತಕ್ಕಂತೆ ಜೀವನ ರೂಪಿಸಿಕೊಂಡಿದ್ದಾರೆ. ಮತ್ತೊಂದೆಡೆ ಇಷ್ಟು ವರ್ಷ ಸುಗಮಕಾರರಾಗಿ ಕಾರ್ಯನಿರ್ವಹಿಸಿರುವ ಇವರಿಗೆ ಪದೋನ್ನತಿ ನೀಡುವ ಬದಲಾಗಿ ಹಿಂಬಡ್ತಿ ನೀಡಲಾಗಿದೆ. ದಿಢೀರನೆ ಕೆಲಸದಿಂದ ತೆಗೆದಿರುವುದು ನಿಜಕ್ಕೂ ಸುಗಮಕಾರರಿಗೆ ಅನ್ಯಾಯ ಮಾಡಲಾಗಿದೆ. ಹೀಗಾಗಲು ಬಿಡದೆ ಎಲ್ಲ ಸುಗಮಕಾರನ್ನು ಮುಂದುವರೆಸಬೇಕು” ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಲಿಂಗರಾಜ್ ಅವರಿಗೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತಿಪಟೂರು | ಅರಣ್ಯ ಇಲಾಖೆ ಎಡವಟ್ಟು; ಆಕಸ್ಮಿಕ ಅಗ್ನಿ ಅವಘಡಕ್ಕೆ ಬಲಿಯಾದ ಚಿರತೆ
ಅಭಿಯಾನ ನಿರ್ದೇಶಕರು, ಅಧಿಕೃತ ಜ್ಞಾಪನ ಪತ್ರದಲ್ಲಿ ಆಶಾ ಸುಗಮಕಾರರನ್ನು ಕೆಲಸದಿಂದ ಕೊನೆಗೊಳಿಸುವುದಾಗಿ ನೀಡಿರುವ ಆದೇಶವನ್ನು ಕೂಡಲೇ ಹಿಂತೆಗೆದುಕೊಂಡು ಸುಗಮಕಾರರಾಗಿ ಮುಂದುವರೆಸಲು ಅವಕಾಶ ನೀಡಬೇಕು. ಸುಗಮಕಾರರಾಗಿ ಮುಂದುವರೆದ ಆಶಾಗಳನ್ನು ಆಶಾ ಕಾರ್ಯಕರ್ತೆಯರಿಂದ ಬಿಡುಗಡೆಗೊಳಿಸಿ, ಕನಿಷ್ಠ ₹12,000 ವೇತನ ಮತ್ತು ಪ್ರಯಾಣ ಭತ್ಯೆ ನೀಡಿ ಸೂಕ್ತ ಸೇವೆಗೆ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಶಾ ಸುಗಮಕಾರರಾದ ಅನ್ನಪೂರ್ಣ ಮುಂಡರಗಿ, ಶರಣಮ್ಮ ಹಿರೇಮಠ, ಲಲಿತ ಬಿ ಕಬ್ಬಿಣದ, ಶರಣಮ್ಮ ಚಲವಾದಿ, ನೀಲಮ್ಮ ತಟ್ಟಿ, ಪರಿಮಳ ಬಡಿಗೇರ್, ರೇಣುಕಾ ಹನಸಿ, ಬಸ್ಸಮ್ಮ ಇಳಿಗೆರ್ ಸೇರಿದಂತೆ ಇತರರು ಇದ್ದರು.