ಕೊಪ್ಪಳ ನಗರದ ಸೇವಾದಳ ಜಿಲ್ಲಾ ಕಚೇರಿಯಲ್ಲಿ ನಡೆದ ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿಯ ಸಭೆಯಲ್ಲಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನಾಗಿ ಇತ್ತೀಚೆಗೆ ನಿವೃತ್ತರಾದ ಪ್ರೌಢಶಾಲಾ ಸಹಶಿಕ್ಷಕರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಸೋಮಶೇಖರ್ ಹರ್ತಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಇ. ಬಸವರಾಜು ತಿಳಿಸಿದ್ದಾರೆ.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವಾರ್ಷಿಕ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿ, “ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ತಳಮಟ್ಟದಲ್ಲಿ ಶಾಲಾಕಾಲೇಜುಗಳಲ್ಲಿ ಸಂಘಟಿಸುತ್ತಾ ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಹಾಗೂ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ಪ್ರಯತ್ನಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಮಿತಿಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಅನುಕೂಲವಾಗುವಂತೆ ಜಿಲ್ಲಾ ಅಧ್ಯಕ್ಷರನ್ನಾಗಿ ಉತ್ತಮ ಸಂಘಟಕರು ಕ್ರಿಯಾಶೀಲ ವ್ಯಕ್ತಿತ್ವದ ಸೋಮಶೇಖರ್ ಹರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ನೇತೃತ್ವದಲ್ಲಿ ಜಿಲ್ಲಾ ಸಮಿತಿಯು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ವಿಜ್ಞಾನ ಕಾರ್ಯಕ್ರಮಗಳನ್ನು ಆಯೋಜಿಸಿ ವೈಜ್ಞಾನಿಕ ಮನೋಭಾವ ಬೆಳೆಸಲು ಮುಂದಾಗಬೇಕು” ಎಂದರು.
ಸಮಿತಿಯ ರಾಜ್ಯ ಉಪಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಜಿಲ್ಲೆಯಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕತೆಯನ್ನು ಬೆಳೆಸಲು ವಿಜ್ಞಾನ ಸಂಘಟನೆಯ ಅಗತ್ಯವಿದ್ದು ಆ ನಿಟ್ಟಿನಲ್ಲಿ ಕೆಜೆವಿಎಸ್ ಜಿಲ್ಲಾ ಘಟಕ ಶ್ರಮವಹಿಸಬೇಕು. ಜಿಲ್ಲೆಯಲ್ಲಿ ಕೃಷಿ, ನೆಲ, ಜಲ ಹಾಗೂ ವಾಯುಮಾಲಿನ್ಯದ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಮಕ್ಕಳಿಗೆ ಪರಿಸರ ಮಾಲಿನ್ಯ ಸೇರಿದಂತೆ ವಿಜ್ಞಾನ ಶಿಕ್ಷಣಕ್ಕೆ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಪ್ರವೃತ್ತರಾಗಬೇಕು” ಎಂದು ಹೇಳಿದರು.




ಹಿರಿಯ ಸಾಹಿತಿ ಎ ಎಂ ಮದರಿ ಮಾತನಾಡಿ, “ಶಿಕ್ಷಕರು ಮತ್ತು ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯಕ್ರಮಗಳು ಹಿಂದೆಂದಿಗಿಂತಲೂ ಇಂದು ಅವಶ್ಯ, ಸಮೂಹ ಮಾಧ್ಯಮಗಳಲ್ಲಿ ವಿಜ್ಞಾನ-ತಂತ್ರಜ್ಞಾನವನ್ನು ಬಳಸಿಕೊಂಡು ಫಲ, ಜ್ಯೋತಿಷ್ಯ ಹಾಗೂ ಮೂಢನಂಬಿಕೆಗಳನ್ನು ಹರಡಲಾಗುತ್ತಿದೆ, ಇದು ನಿಲ್ಲಬೇಕು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲೇ ಮಕ್ಕಳಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸಲು ಅನುಕೂಲವಾಗಲು ವಿಜ್ಞಾನ ಸಂಘಟನೆಗಳು ಶ್ರಮಿಸಬೇಕು” ಎಂದರು.
ಇದನ್ನೂ ಓದಿ: ಕೊಪ್ಪಳ | ಪ್ರವಾದಿ ಮಹಮ್ಮದ್ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್
ನೂತನವಾಗಿ ಆಯ್ಕೆಯಾದ ಜಿಲ್ಲಾ ಅಧ್ಯಕ್ಷ ಸೋಮಶೇಖರ್ ಹರ್ತಿ ಮಾತನಾಡಿ, “ಸೇವೆಯಲ್ಲಿ ಇದ್ದಾಗ ಶಾಲೆಗಳಲ್ಲಿ ಆಕಾಶ ವೀಕ್ಷಣೆ, ಪವಾಡ ಬಯಲು, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ಸೇರಿದಂತೆ ಅನೇಕ ವಿಜ್ಞಾನ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದೆವು. ಅಲ್ಲದೇ ಇನ್ನಿತರ ಸಂಘ ಸಂಸ್ಥೆಗಳು ಸೇರಿದಂತೆ ಹಿರಿಯ ವಿಜ್ಞಾನ ಶಿಕ್ಷಕರ ಸಹಯೋಗದಲ್ಲಿ ಜಿಲ್ಲಾ ವಿಜ್ಞಾನ ಭವನಕ್ಕೆ ನಿವೇಶನ ಮತ್ತು ಕಟ್ಟಡಕ್ಕೆ ಅನುದಾನದ ಸಲುವಾಗಿ ಸಾಕಷ್ಟು ಹೋರಾಟ ಮಾಡಿದ್ದೆವು. ಪರಿಣಾಮವಾಗಿ ಇಂದು ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ವಿಜ್ಞಾನ ಕೇಂದ್ರ ತಲೆಯೆತ್ತಿದೆ. ಕೇಂದ್ರದಲ್ಲಿ ಮಕ್ಕಳು ಮತ್ತು ವಿಜ್ಞಾನ ಶಿಕ್ಷಕರಿಗೆ ನೆರವಾಗುವ ನಿಟ್ಟಿನಲ್ಲಿ ವೈವಿಧ್ಯಮಯ ವಿಜ್ಞಾನ ಚಟುವಟಿಕೆಗಳನ್ನು ಆಯೋಜಿಸಲು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಲಾಗುವುದು ಮತ್ತು ಈ ಕಾರ್ಯಕ್ರಮಗಳನ್ನು ತಾಲೂಕಾ ಘಟಕಗಳ ಮೂಲಕ ತಳಮಟ್ಟದಲಿ ಶಾಲಾ ಕಾಲೇಜುಗಳಲ್ಲಿಯೂ ಆಯೋಜಿಸಲು ರೂಪರೇಷೆಗಳನ್ನು ರೂಪಿಸಲಾಗುವುದು” ಎಂದರು.
ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಅಮರೇಶ ಕಮ್ಮಾರ, ಜಿಲ್ಲಾ ಕಾರ್ಯದರ್ಶಿ ದೇವೇಂದ್ರ ಜಿರ್ಲಿ, ಖಜಾಂಚಿ ವಿಜಯಕುಮಾರ್ ಬೊಂದಾಡೆ, ಸಹಕಾರ್ಯದರ್ಶಿ ರಘುರಾಮ ಸಂಗಳದ, ಪದಾಧಿಕಾರಿಗಳಾದ ಈಶ್ವರ ಹತ್ತಿ, ಸಂಪನ್ಮೂಲ ಶಿಕ್ಷಕರಾದ ಸಿದ್ಧಲಿಂಗೇಶ್ವರ, ಶಿಕ್ಷಣಶಿಲ್ಪಿ ಪ್ರಶಸ್ತಿ ಪುರುಸ್ಕೃತ ಶಿಕ್ಷಕಿ ಜಯಶ್ರೀ ಅಂಗಡಿ, ಹಿರಿಯಪತ್ರಕರ್ತರಾದ ಬಸವರಾಜ ಶೀಲವಂತರ, ರಮೇಶ್ ಚಿಣಗಿ, ಮಹಮದ್ ಮಿಯಾ ಹಾಗೂ ಪದಾಧಿಕಾರಿಗಳು ಇದ್ದರು.