ಕೊಪ್ಪಳ ನಗರದಲ್ಲಿ ಇತ್ತೀಚೆಗಷ್ಟೇ ನಡೆದ ಹತ್ಯೆ ಪ್ರಕರಣವು ತೀವ್ರ ಆತಂಕಕ್ಕೊಳಪಡಿಸಿದೆ. ಕುರುಬರ ಓಣಿಯ ಗವಿಸಿದ್ದಪ್ಪ ನಾಯಕ ಎಂಬ ಯುವಕನನ್ನು ಪ್ರೀತಿ ವಿಚಾರಕ್ಕೆ ಹತ್ಯ ಮಾಡಲಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ನೊಂದ ಕುಟುಂಬಕ್ಕೆ ನ್ಯಾಯಬೇಕು ಎಂದು ಸೋಲಿಡಾರಿಟಿ ಯೂತ್ ಮೂಮೆಂಟ್ ಕೊಪ್ಪಳ ಘಟಕ ಆಗ್ರಹಿಸಿದೆ.
ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮ ಎಲ್ ಅರಸಿದ್ದಿ ಅವರಿಗೆ ಮನವಿ ಸಲ್ಲಿಸಿದರು. ತಪ್ಪಿತಸ್ಥರು ಬಂಧಿತರಾಗಿದ್ದಾರೆ ಎಂಬುದು ಸಂತೋಷದ ವಿಷಯವಾಗಿದ್ದರೂ ಈ ಘಟನೆಯು ಶಾಂತಿ, ಕಾನೂನು ಹಾಗೂ ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಪರಿಣಾಮ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್‌ಯುಎಮ್ ಒತ್ತಾಯಿಸಿದೆ.
ಆರೋಪಿಗಳಲ್ಲಿ ಗಾಂಜಾ ಸೇವನೆ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಗರದಲ್ಲಿ ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಪ್ರಕರಣದಲ್ಲಿ ಯಾವುದೇ ಸಮುದಾಯವನ್ನು ಉದ್ದೇಶಿಸಿ ತಪ್ಪು ಪ್ರಚಾರ ನಡೆಯದಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ಮುಖಂಡರು ವಿನಂತಿಸಿದರು.
ಇದನ್ನೂ ಓದಿ: ಕೊಪ್ಪಳ | ಪ್ರೀತಿ ವಿಚಾರಕ್ಕೆ ಯುವಕನ ಕೊಲೆ: ಓರ್ವ ಆರೋಪಿ ಶರಣಾಗತಿ
ಈ ವೇಳೆ ಸೋಲಿಡಾರಿಟಿ ಯೂತ್ ಮೂಮೆಂಟ್‌ನ ಜಿಲ್ಲಾಧ್ಯಕ್ಷ ಎಜಾಜ್ ಅಹ್ಮದ್ ಶರೀಫ್, ಕಾರ್ಯದರ್ಶಿ ಮಹ್ಮದ್ ಯೂಸೂಫ್, ಸದಸ್ಯರಾದ ಮಹ್ಮದ್ ಗೌಸ್ ಪಟೇಲ್, ರಹಮತ್ ಹುಸೇನ್ ಹಾಗೂ ಇತರರು ಇದ್ದರು.