ದೇವದಾಸಿ ಪುನರ್ವಸತಿ ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದೇ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದು, ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿದೆ ಎಂದು ಕರ್ನಾಟಕ ಭೀಮ್ ಆರ್ಮಿ ಏಕತಾ ಮಿಷನ್, ಕೊಪ್ಪಳ ಜಿಲ್ಲಾ ಸಮಿತಿ ಅಧ್ಯಕ್ಷ ನಿಂಗು ಬೆಣಕಲ್ ಆರೋಪಿಸಿದರು.
ಕೊಪ್ಪಳ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, “ಅಭಿವೃದ್ಧಿ ನಿರಿಕ್ಷಕರು ಹಾಗೂ ಯೋಜನಾಧಿಕಾರಿಗಳು, ದೇವದಾಸಿ ಪುನರ್ವಸತಿ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿ ಪೂರ್ಣಿಮಾ ಅವರು ಅಧಿಕಾರ ವಹಿಸಿಕೊಂಡಾಗಿನಿಂದಲೂ ದೇವದಾಸಿ ನಿರ್ಮೂಲನೆ ಬಗ್ಗೆ ಈವರೆಗೆ ಯಾವುದೇ ಕಾರ್ಯಕ್ರಮ ಮಾಡಿಲ್ಲ. ಕಾಟಾಚಾರಕ್ಕೆ ವರ್ಷಕ್ಕೆ ಒಂದು ಬಾರಿ ಕಚೇರಿಯಲ್ಲಿಯೇ ಸಭೆ ಮಾಡಿ ವರ್ಷಪೂರ್ತಿ ಕುಳಿತು ಸಮಯ ಕಳೆಯುತ್ತಾರೆ” ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
“ದೇವದಾಸಿ ಆಚರಣೆ, ಮುತ್ತು ಕಟ್ಟುವ ಪದ್ಧತಿಯ ಪ್ರಮುಖ ಸ್ಥಳವಾದ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಪ್ರತಿ ಹುಣಿಮೆ ಮತ್ತು ಮಂಗಳವಾರ, ಶುಕ್ರವಾದಂದು ಲಕ್ಷಾಂತರ ಮಂದಿ ಸೇರುತ್ತಾರೆ. ಅಂತಹ ಸಂದರ್ಭಗಳಲ್ಲಿ ದೇವರ ಹೆಸರಿನಲ್ಲಿ ಮುತ್ತು ಕಟ್ಟಿ ದೇವದಾಸಿ ಮಾಡುವ ಸೂಕ್ಷ್ಮ ಪ್ರದೇಶಗಳಲ್ಲಿ ಯೋಜನಾಧಿಕಾರಿಗಳು ಯಾವುದೇ ಜಾಗೃತಿ ಕಾರ್ಯಕ್ರಮಗಳನ್ನು ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಕರಪತ್ರಗಳನ್ನು ಹಂಚುವುದಾಗಲಿ, ಬ್ಯಾನರ್, ಗೋಡೆ ಬರಹದ ಮೂಲಕ ಜಾಗೃತಿ ಮೂಡಿಸುವುದಾಗಲೀ ಮಾಡುತ್ತಿಲ್ಲ” ಎಂದು ಆರೋಪಿಸಿದರು.
“ಮಾಜಿ ದೇವದಾಸಿ ತಾಯಂದಿರು ಅವರ ಮಕ್ಕಳಿರುವ ಗ್ರಾಮಗಳಿಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ಹಾಗೂ ದೇವದಾಸಿಯಂತಹ ಅನಿಷ್ಟ ಪದ್ಧತಿಗಳ ಕುರಿತು ಅರಿವು ಅಥವಾ ಜಾಗೃತಿ ಮೂಡಿಸುವ ವಾಹನಕ್ಕೂ ಸರ್ಕಾರ ಅನುದಾನ ಮೀಸಲಿಟ್ಟದೆ. ಆದರೂ ಕೂಡ ಅನುದಾನವನ್ನು ಬಳಸದೇ ಅಥವಾ ಖರ್ಚು ಮಾಡದೆ ಸಕಾರಣವಿಲ್ಲದೇ ಅನುದಾನವನ್ನು ಮರಳಿಸಿದ್ದಾರೆ. ಇದು ಅಧಿಕಾರಿಗಳ ಅಸಡ್ಡೆತನ ಮತ್ತು ಕರ್ತವ್ಯ ಲೋಪವಾಗಿದೆ. ಇಂತಹ ಬೇಜವಾಬ್ದಾರಿ ಅಧಿಕಾರಿ ಪೂರ್ಣಿಮಾ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು” ಎಂದು ದಾಖಲೆಗಳ ಸಹಿತ ಜಿಲ್ಲಾಧಿಕಾರಿಗೆ ಮನವಿ ನೀಡಿ ಆಗ್ರಹಿಸಿದರು.
“ಕೊಪ್ಪಳ ಜಿಲ್ಲಾ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ಹಿಸುತ್ತಿರುವ ಸಿಬ್ಬಂದಿಗಳ ಗೌರವಧನ ನೀಡುತ್ತಿರುವ ಸಂಸ್ಥೆಯೊಂದಿಗೆ ಹಣ ಪಡೆದು, ತಮಗೆ ಪರಿಚಿತರೊಂದಿಗೆ ಶಾಮಿಲಾಗಿದ್ದು, ದಾಖಲೆ ನಿರ್ವಹಿಸುವ ಉದ್ಧೇಶದಿಂದ ದರಪಟ್ಟಿ ಆಹ್ವಾನಿಸಿ ವಾರ್ತಾ ಇಲಾಖೆಗೆ ಪ್ರಕಟಣೆ ನೀಡದೆ ತಾಲೂಕು ಕಚೇರಿಯ ಸೂಚನಾ ಫಲಕಕ್ಕೆ ನೇಮಕಾತಿ ಆದೇಶ ಪ್ರತಿ ಅಂಟಿಸಿ ಇಲಾಖೆಯ ದೃಢೀಕರಣ ಪಡೆಯದೆ ನಿಯಮಬಾಹಿರವಾಗಿ ಅನರ್ಹ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಬೆಂಗಳೂರಿನ ಸಂಸ್ಥೆಗೆ ಆದೇಶ ನೀಡಿ ಭ್ರಷ್ಟಾಚಾರ ಮಾಡಿದ್ದಾರೆ” ಎಂದರು.
“ಬೇಜವಾಬ್ದಾರಿ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಹದಿನೈದು ವರ್ಷದ ಬಾಲಕಿಯು ಮುತ್ತು ಕಟ್ಟಿಕೊಂಡು ದೇವರ ಹೆಸರಿನಲ್ಲಿ ದೇವಸ್ಥಾನದಲ್ಲಿ ಸುತ್ತಾಡುತ್ತಿದ್ದಾಳೆ. ಮೇಘರಾಜ ಸಾ ಅಗಳಕೇರಿಯವರ ಹದಿನೈದು ವರ್ಷದ ಮಗಳು ಲತಾ ಎಂಬ ಬಾಲಕಿಯನ್ನು ದೇವದಾಸಿಯನ್ನಾಗಿ ಮಾಡಿ ಮುತ್ತು ಕಟ್ಟಿದವರನ್ನಾಗಲಿ ಅದಕ್ಕೆ ಪ್ರಚೋದನೆ ನೀಡಿದವರ ಮೇಲಾಗಲಿ ಕಾನೂನು ಕ್ರಮ ಜರುಗಿಸುವಲ್ಲಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದು, ಇವರನ್ನು ಕೂಡಲೇ ತುರ್ತಾಗಿ ಅಮಾನತು ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಮಲೆನಾಡಿನ ಅರಣ್ಯ ಕಾಯ್ದೆ, ಭೂಮಿ-ವಸತಿ ಸಮಸ್ಯೆ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತುವೆ: ಸಂಸದ ಶ್ರೇಯಸ್ ಪಟೇಲ್
“ದಾಖಲೆಗಳ ಸಹಿತ ದೂರು ಸಲ್ಲಿಸಿದ್ದೇವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅಮಾನತು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಯಾದ್ಯಂತ ದೇವದಾಸಿ ವಿಮೋಚನಾ ಮಹಿಳಾ ಸಂಘಟನಾಕಾರರು ಹಾಗೂ ಮಾಜಿ ದೇವದಾಸಿ ತಾಯಂದಿರನ್ನು ಒಗ್ಗೂಡಿಸಿ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರ ಹೋರಾಟ ಮಾಡಲಾಗುವುದು” ಎಂದು ಭೀಮ್ ಆರ್ಮಿ ಜಿಲ್ಲಾ ಮುಖಂಡ ಮಾಂತೇಶ ಮ್ಯಾಗಳಮನಿ ಎಚ್ಚರಿಕೆ ನೀಡಿದರು.
ನಿಂಗರಾಜ ಜಿ ಎಸ್ ಬೆಣಕಲ್, ಕರಿಯಪ್ಪ ಮಣ್ಣಿನವರ, ಯುನೂರಪ್ಪ ಬಣಕಾರ, ಯಲ್ಲಪ್ಪ ಸಣ್ಣಿಂಗನವರ ಸೇರಿದಂತೆ ಇತರರು ಇದ್ದರು.