ಕೊಪ್ಪಳ ಜಿಲ್ಲೆಯ ಇರಕಲ್ ಗಡಾ ಹೋಬಳಿ ವ್ಯಾಪ್ತಿಯಲ್ಲಿ ಕರಡಿ ದಾಳಿ ಹೆಚ್ಚುತ್ತಿದ್ದು, ಎರಡು ದಿನಗಳ ಹಿಂದಷ್ಟೇ ಇಂದರಗಿಯಲ್ಲಿ ರೈತನ ಮೇಲೆ ದಾಳಿ ನಡೆದಿತ್ತು. ಭಾನುವಾರ ಸಂಜೆ ಈರಣ್ಣ ಜಾಲಿಗಿಡದ ಎಂಬಾತನ ಮೇಲೆ ನಾಲ್ಕು ಕರಡಿಗಳು ಏಕಕಾಲಕ್ಕೆ ಮಾರಣಾಂತಿಕ ದಾಳಿ ನಡೆಸಿದ್ದು ಜನರು ಭಯಭೀತರಾಗಿದ್ದಾರೆ.
ಕೊಪ್ಪಳ ತಾಲೂಕಿನ ಹೊಸೂರು ಗ್ರಾಮದ ಈರಣ್ಣ ಸೋಮವಾರ ಹುಣ್ಣಿಮೆ ಹಿನ್ನೆಲೆಯಲ್ಲಿ ಹುಲಿಗಿಗೆ ಪಾದಯಾತ್ರೆ ಬೆಳೆಸಿದ್ದ. ಆದರೆ, ಸಂಜೆ ಮನಸ್ಸು ಬದಲಾಯಿಸಿ ಕೊಪ್ಪಳಕ್ಕೆ ತೆರಳಲು ಇರಕಲ್ ಗಡಾ ಬಳಿ ತೆರಳುವಾಗ ನಾಲ್ಕು ಕರಡಿಗಳು ದಾಳಿ ಮಾಡಿವೆ.
ಮೈ, ಕೈ, ತಲೆ ಭಾಗಕ್ಕೆ ಬಲವಾಗಿ ಕಚ್ಚಿ, ತೀವ್ರವಾಗಿ ಗಾಯಗೊಳಿಸಿವೆ. ಅಸ್ವಸ್ಥನಾಗಿ ಬಿದ್ದಿದ್ದಾತನನ್ನು ಸ್ಥಳದಲ್ಲಿದ್ದವರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಹಾಧರಣಿ | ಕೃಷಿ ಉತ್ಪನ್ನಕ್ಕೆ ಖರ್ಚಿಗಿಂತ 50% ಆದಾಯ ಕೊಡುತ್ತೇವೆ ಎಂದಿದ್ದವರು ಉಲ್ಟಾ ಹೊಡೆದಿದ್ದಾರೆ: ವಿಜು ಕೃಷ್ಣನ್
“ಕೊಪ್ಪಳ ತಾಲೂಕು ಭಾಗದಲ್ಲಿ ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇದನ್ನು ಕರಡಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸರ್ಕಾರ ಅನುಮೋದನೆ ನೀಡಿಲ್ಲ. ಇತ್ತೀಚೆಗೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕರಡಿ ದಾಳಿ ತಡೆಗೆ ಅರಣ್ಯದ ಸುತ್ತ ತಂತಿಬೇಲಿ ಹಾಕುವಂತೆ ಮನವಿ ಸಲ್ಲಿಸಿದ್ದರು. ಆದರೆ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ” ಎಂದು ಸ್ಥಳೀಯರು ಆರೋಪಿಸಿದರು.