ಕಾವ್ಯ ಒಂದು ಸಮುದ್ರ. ಅದರ ತಲವನ್ನು, ಬೆರಗನ್ನುಅಳೆಯುವುದು ಅಸಾದ್ಯ. ಕಾವ್ಯ ಸಮುದ್ರದಲ್ಲಿ ಯಾನ ಮಾಡುವುದು ಅತಿಮಾನುಷ ಯಾತನೆ. ಈ ಯಾತನೆ ಧನಾತ್ಮಕ ಸುಖ ನೀಡುತ್ತದೆ. ಕವಿಗಳು ಅಲೌಕಿಕ ಆನಂದವನ್ನು ಜನರ ಸಂಕಟ, ತಲ್ಲಣಗಳ ಕಣ್ಣೀರನ್ನು ಕಾಣುತ್ತಲೇ ಪ್ರತಿಸ್ಪಂದಿಸುವರು ಎಂದು ಕವಿ, ವಿಮರ್ಶಕ ದೇವೇಂದ್ರಪ್ಪ ಜಾಜಿ ಅಭಿಪ್ರಾಯಪಟ್ಟರು.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ನಾಲ್ಕನೇ ರಾಜ್ಯ ‘ಕವಿ-ಕಾವ್ಯ ಸಮ್ಮೇಳನ’ದ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, “ಕಾವ್ಯಕ್ಕೂ, ಕನ್ನಡ ಮಣ್ಣಿಗೂ ಹೊಕ್ಕುಳಬಳ್ಳಿಯ ಸಂಬಂಧ ಪ್ರಾಚೀನ ಕಾಲದಿಂದಲೂ ಇದೆ. ನಮ್ಮ ಜನಸಮುದಾಯಗಳು ಅನುಭವ-ದುಡಿಮೆ-ಹಾಡಿನಿಂದಲೇ ತಮ್ಮ ನೋವನ್ನು ನಿವಾರಿಸಿಕೊಂಡದ್ದೂ ಇದೆ. ದಣಿಪ ಹೃದಯಕ್ಕೆ, ನೋವುಂಡ ರಟ್ಟೆಗೆ ಕೇವಲ ಆಹಾರ, ನೀರು ಮಾತ್ರ ಮದ್ದಲ್ಲ. ಹಾಡು, ಕುಣಿತವೂ ಕೂಡ ಮದ್ದು ಎಂಬುದನ್ನು ನಮ್ಮ ನೆಲದ ಜನಪದ ಧಾರೆಗಳು ಹೇಳುತ್ತವೆ. ಶ್ರಮಿಕಲೋಕ, ಕೃಷಿಕಲೋಕ ಒಡಲಲ್ಲಿ ಜೀವತಳೆದ ಕಾವ್ಯದ ಸೆಳೆಕು ವಿಸ್ತಾರವಾದದ್ದು. ಈ ಮಣ್ಣಿನ ಮಕ್ಕಳ ಕಾವ್ಯ ಮಾತೃಮೂಲವಾದದ್ದು” ಎಂದರು.
“ಕೃಷ್ಣಗೊಲ್ಲರ ಕಾವ್ಯ, ಮೈಲಾರಲಿಂಗನ ಕಾವ್ಯ, ಜುಮಜಪ್ಪ ಕಾವ್ಯ, ಮಲೆಮಾದೇಶ್ವರ ಕಾವ್ಯ, ಮಂಟೇಸ್ವಾಮಿ ಕಾವ್ಯ, ಕುಮಾರರಾಮನ ಕಾವ್ಯ, ಕೆರೆಗೆಹಾರ ಭಾಗೀರಥಿ ಕಾವ್ಯ, ಬಮದಮ್ಮನ ಇತಿಹಾಸ, ಬೊಬ್ಬಿಲಿನಾಗಿರೆಡ್ಡಿ ಕಾವ್ಯ ಹೀಗೆ ಅಪಾರ ಕಾವ್ಯರಾಶಿಯು ಜನಪದರ ಸ್ಮೃತಿಯ ಕೋಶದಲ್ಲಿ ಉಳಿದುಬಂದಿದೆ. ಮಾತೃಮೂಲದಿಂದ ಪಿತೃಪ್ರಧಾನ ವ್ಯವಸ್ಥೆಯ ಕೈಗೆ ಸಿಕ್ಕ ಜಾನಪದ ಹಾಡು ಸಾಹಿತ್ಯವು ತಮ್ಮ ಅನುಕೂಲಕ್ಕೆ ತಿದ್ದುಪಡಿ ಮಾಡಿ ಅದರೊಳಗೆ ಜಾತಿ, ವರ್ಗ, ವರ್ಣ ಲಿಂಗಭೇದದ ವಿಕಾರಗಳನ್ನು ತುಂಬಿ ಅಪಮೌಲೀಕರಣದ ನೆಲೆಗಳನ್ನು ಘೊಷಿಸಿಕೊಂಡು ಬಂದರು” ಎಂದು ತಿಳಿಸಿದರು.
“ಸಮೃದ್ಧ ಮೌಖಿಕಧಾರೆಯಿಂದ ಚಲಿಸುತ್ತ ಬಂದ ಕನ್ನಡ ಕಾವ್ಯದ ಇನ್ನೊಂದು ಧಾರೆ ಅಕ್ಷರ ಆಶ್ರಯ ಪಡೆದದ್ದು, ಆಳರಸರು ಹಾಕಿಸಿದ ಶಾಸನಗಳಲ್ಲಿ. ಅರಸರ ಆಶ್ರಯದಲ್ಲಿದ್ದ ಕವಿಗಳು ಪದ್ಯಗಳನ್ನು ಶಾಸನಗಳಲ್ಲಿ ದಾಖಲಿಸಿ ಕಾವ್ಯ ಪ್ರಜ್ಞೆ ಮೆರೆದಿದ್ದಾರೆ. ಕಾವ್ಯದ ನಿಜವಾದ ಅರ್ಥಪೂರ್ಣ ಬೆಳೆ ಬಂದದ್ದು ಹತ್ತನೇ ಶತಮಾನದಲ್ಲಿ. ಕನ್ನಡವನ್ನೇ ಉಸಿರಾಡಿದ ರನ್ನ, ಪೊನ್ನ, ಪಂಪ, ನಾಗಚಂದ್ರರಂಥ ಜೈನ್ ಕವಿಗಳು ರಾಮಾಯಣ, ಮಹಾಭಾರತದಂತ ಕಾವ್ಯಗಳು ಕನ್ನಡದಲ್ಲಿ ದೊರೆತದ್ದು ಜೈನ್‌ಕವಿಗಳಿಂದ” ಎಂದು ತಿಳಿಸಿದರು.
“ಬಸವಾದಿ ಶರಣರ ನಾಯಕತ್ವದಲ್ಲಿ ವಚನ ಕಾವ್ಯ ಪರಂಪರೆ ಕ್ರಾಂತಿಗೆ ಮುನ್ನುಡಿ ಬರೆಯಿತು. ಶರಣರ ವಚನ ಸಾಹಿತ್ಯ ಜನರ ಬದುಕಿನ ಭಾಗವಾಗಿ ಎದೆಯ ನುಡಿಯಾಗಿ ರೂಪುಗೊಂಡಿತು. ಜಾತಿ, ಧರ್ಮ, ಲಿಂಗಾತೀತ ಸಮಾಜವನ್ನು ಶರಣರು ಕಟ್ಟಬಯಸಿದರು. ಬರಹದ ಬೇಗುದಿಯಿಂದ ಇದು ನೆರವೇರಿತು” ಎಂದರು.
“ತತ್ವಪದ, ಸೂಫಿ ಪರಂಪರೆ ಜಾತಿರಾಹಿತ್ಯ ನೆಲೆಯಲ್ಲಿ ಜನಸಾಮಾನ್ಯರ ಓಣಿಗಳಲ್ಲಿ ಅವರ ಕಷ್ಟ, ಕಾರ್ಪಣ್ಯಗಳಿಗೆ ಸ್ಫಂದಿಯಾಗಿ ತತ್ವಪದಗಳು ರಚನೆಯಾದವು. ಸೂಫಿಗಳು, ಆರೂಢ(ತತ್ವಜ್ಞಾನಿ)ರ ಬರಹಗಳಿಂದ, ಹಾಡುಗಳಿಂದ, ಭಜನೆಗಳಿಂದ ಜನರ ಅರಿವನ್ನು ವಿಸ್ತರಿಸಿದರು. ಧಾರ್ಮಿಕ ತೀವ್ರ ಸಂಘರ್ಷದ ಕಾಲದಲ್ಲಿ ಉತ್ಪನ್ನಗೊಂಡ ತತ್ವಜ್ಞಾನಿಗಳು ತತ್ವಪದಗಳು, ವರ್ಗ, ವರ್ಣ, ಜಾತಿ ವಿಷವರ್ತುಲದಿಂದ ಬಿಡಿಸಲು ಸತತ ಪ್ರಯತ್ನಿಸಿದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ʼನೆಲ ಬಾಡಿಗೆʼ ಹೆಸರಿನಲ್ಲಿ ಬಡವರ ಶೋಷಣೆ; ಬಾಡಿಗೆ ಜಾಗದಲ್ಲಿ ಪ್ಲಾಸ್ಟಿಕ್ ಗುಡಿಸಲು!
“ಕಾವ್ಯವೆಂಬುದು ಚಲನಶೀಲ ಸಮಾಜದ ಮೂರನೇ ಕಣ್ಣು. ಸದಾ ಜನಸಮುದಾಯಗಳ ಬೆಳಕಾಗಬೇಕು. ಕವಿಯಾದವರು ಪ್ರಯೋಗಶೀಲರಾಗದೇ ಜಡಜಂಜಡಗಳಿಗೆ ದನಿಯಾಗಬೇಕೆಂದು ಕವಿಗಳಿಗೆ ಕರೆಕೊಟ್ಟರು. ಸದ್ಯ ಸುಡುಸಂಕಟಗಳಿಗೆ ಕಾವ್ಯ ಉತ್ತರವೂ ಕೂಡ ಗಂಭೀರವಾಗಿರಬೇಕು” ಎಂದರು.
“ಪ್ರಸ್ತುತ ಕಾವ್ಯ ಈ ಅಂಡ್ರಾಯ್ಡ್ ಯುಗದಲ್ಲಿ ಜನಸಮುದಾಯಗಳಿಗೆ ತಲುಪುವುದು ದುಸ್ತರವಾಗಿದೆ. ರೀಲ್ಸ್ ಸಾಮ್ರಾಜ್ಯದಲ್ಲಿ ಓಲಾಡುತ್ತಿರುವ ಹೊಸ ತಲೆಮಾರಿಗೆ ಕಾವ್ಯದ ಆಳ ಬಿಳಲುಗಳ ಗಂಧ ಹೇಗೆ ಮುಟ್ಟೀತು; ಇದು ಸವಾಲಿನ ಪ್ರಶ್ನೆ” ಎಂದು ಆತಂಕ ವ್ಯಕ್ತಪಡಿಸಿದರು.