ಮನುಷ್ಯ ಯಾಂತ್ರಿಕ ಜೀವನಕ್ಕೆ ತನ್ನನ್ನು ತಾನು ತೊಡಗಿಸಿಕೊಳುತ್ತಿದ್ದಾನೆ. ಅದರ ಜೊತೆ ಹೊಂದಾಣಿಕೆಯನ್ನೂ ಮಾಡಿಕೊಳ್ಳುತ್ತಿದ್ದಾನೆ. ಅದಕ್ಕೆ ಕೆಲವು ಅನುಕೂಲಗಳನ್ನು ಬಯಸುತ್ತಾನೆ. ಪ್ರಸ್ತುತ ದಿನಮಾನದಲ್ಲಿ ವಾಹನವಿಲ್ಲದೆ ಮನೆಯಾಚೆ ಹೊರಡುವದೇ ಇಲ್ಲ. ಹೆಚ್ಚು ದ್ವಿಚಕ್ರ ವಾಹನಗಳನ್ನು ಅವಲಂಭಿಸಿದ್ದಾರೆ. ಆದರೆ ಅದಕ್ಕೆ ಸುಸಜ್ಜಿತವಾದ ರಸ್ತೆ ಇಲ್ಲವೆಂದರೆ ಅವರಿಗೆ ಕಿರಿಕಿರಿ ಆಗುತ್ತದೆ. ಕೊಪ್ಪಳ ತಾಲುಕಿನ ಕೊನೆಯ ಹಳ್ಳಿ ಬೆಳಗಟ್ಟಿ ಪುಟ್ಟ ಗ್ರಾಮ. ಹಟ್ಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿರುತ್ತದೆ. ದಶಕಗಳಿಂದಲೂ ಸುರಕ್ಷಿತ ರಸ್ತೆಯಿಲ್ಲದೆ ವಂಚಿತವಾಗಿದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹೆಸರಲ್ಲಿ ಕಾರ್ಖಾನೆಗಳು ಬರುತ್ತಿವೆ. ಆದರೆ, ನಾಗರಿಕ ವಾಹನ ಸಂಚರಿಸುವ ರಸ್ತೆಯಲ್ಲಿ ಗುಂಡಿ ತೋಡುತ್ತಿವೆ. ಇದಕ್ಕೊಂದು ಉದಾಹರಣೆ ಕೊಪ್ಪಳದಿಂದ ಸುಮಾರ 25 ಕಿಲೋಮೀಟರ್ ದೂರ ಹಾಗೂ ಮುಡರಗಿಯಿಂದ ಕೇವಲ 6 ಕಿಲೋಮೀಟರ್ ದೂರವಿರುವ ಬೆಳಗಟ್ಟಿ ಗ್ರಾಮ, ತಾಲೂಕಿನ ಕಡೆಯ ಹಳ್ಳಿ. ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಅದರಲ್ಲೂ ಗ್ರಾಮದ ಮಧ್ಯ ಭಾಗದಲ್ಲಿ ಹಾದುಹೋಗುವ ದಾರಿ ಕೆಟ್ಟು ಹೋಗಿದೆ. ಸರ್ಕಾರಿ ಬಸ್, ಖಾಸಗಿ ವಾಹನ ಹಾಗೂ ಆಟೋ ಚಲಿವಾಗ ಗುಂಡಿಯೊಳಗೆ ಹಾರಿಯೇ ಮೇಲೆದ್ದು ಹೋಗಬೇಕು. ಇದಕ್ಕೆ ಗ್ರಾಮ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಯೂ ಕೂಡ ಇತ್ತ ಕಣೆತ್ತಿ ನೋಡುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
“ಕಲ್ಯಾಣ ಕರ್ಣಾಟಕದ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ತಂದಿದ್ದರೂ ಅದರ ಸದ್ಬಳಕೆ ಮಾತ್ರ ಆಗುತ್ತಿಲ್ಲ. ಅನುದಾನವೆಲ್ಲಾ ಯಾರ್ಯಾರದ್ದೋ ಜೇಬು ಸೇರುತ್ತಿದೆ. ಹೀಗಾದರೆ ಗುಂಡಿ ಮುಚ್ಚುವವರಾದರೂ ಯಾರು? ಧೂಳಿನಲ್ಲೇ ಜೀವನ ನಡೆಸುತ್ತಿರುವ ನಮ್ಮಂಥವರ ಗೋಳು ಕೇಳೋಕೂ ಯಾರೂ ಇಲ್ಲ” ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
“ಇಲ್ಲಿಯವರೆಗೂ ಬೇಸಿಗೆ ಇತ್ತು. ರಸ್ತೆಯ ವಾಹನಗಳ ದಟ್ಟಣೆಗೆ ರಸ್ತೆಯ ಧೂಳು, ಗುಡಿಸಲು, ಸಣ್ಣಸಣ್ಣ ಅಂಗಡಿ, ಪಾದಚಾರಿಗಳಿಗೆ ಆವರಿಸುತ್ತಿತ್ತು. ಈಗ ಮಳೆಗಾಲ ಆರಂಭವಾಗಿದ್ದು, ಧೂಳು ಕಡಿಮೆಯಾಗಿದೆ. ಕೆಸರು ಹೆಚ್ಚಾಗಿದೆ. ಕೊಪ್ಪಳದಿಂದ ಮುಂಡರಗಿಗೆ ಚಲಾಯಿಸುವ ವಾಹನಗಳ ಭಾರಕ್ಕೆ ರಸ್ತೆ ದಂಡಿ ದಂಡಿಯಾಗಿ ಗುಂಡಿ ಬೀಳುತ್ತಿವೆ. ಅವುಗಳನ್ನು ಮುಚ್ಚಿಸುವ ಗೋಜಿಗೆ ಯಾರೂ ಚಿಂತಿಸುತ್ತಿಲ್ಲ. ಕೊನೆಪಕ್ಷ ಮಣ್ಣು ತುಂಬಿಸಿಯಾದರೂ ದೊಡ್ಡದಾದ ಗುಂಡಿ ಮುಚ್ಚಿಸುವ ಕೆಲಸ ಮಾಡುತ್ತಿಲ್ಲ” ಎಂಬುದು ಸ್ಥಳೀಯರ ಆರೋಪವಾಗಿದೆ.

ವಾಹನಗಳ ದಟ್ಟಣೆ ಹೆಚ್ಚಾದಂತೆ ಸುಸಜ್ಜಿತ ರಸ್ತೆಗಳು ನಿರ್ಮಾಣವಾಗಬೇಕು. ಆದರೆ, ಇಲ್ಲಿ ಮಾತ್ರ ವಾಹನಗಳ ಓಡಾಟ ಹೆಚ್ಚಾದಂತೆಲ್ಲ ರಸ್ತೆಗಳ ಗುಂಡಿಗಳೂ ಹೆಚ್ಚಾಗುತ್ತಿವೆ. ಗ್ರಾಮ ಪಂಚಾಯಿತಿ ಲೋಕೋಪಯೋಗಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆಯೇ? ಎನ್ನುವುದು ಬೆಳಗಟ್ಟಿ ಗ್ರಾಮದಲ್ಲಿ ಹಾದು ಹೋಗುವ ಪ್ರಯಾಣಿಕರ ಪ್ರಶ್ನೆಯಾಗಿದೆ.
ರಸ್ತೆ ಡಾಂಬರ್ ಕಂಡು ಅದೆಷ್ಟೋ ವರ್ಷಗಳೇ ಕಳೆದಿವೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೂ, ಬೆಳಗಟ್ಟಿ ಗ್ರಾಮದ ರಸ್ತೆ ದುರಸ್ತಿ ಮಾಡುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಬೇಸಿಗೆಯಲ್ಲಿ ಧೂಳು ಮೂಗಿಗೆ ರಾಚಿದರೆ ಮಳೆಗಾಲದ ಕೆಸರಿಗೆ ಕಾಲು ಜಾರಿ ಬಿದ್ದು ಸೊಂಟ ಮುರಿದುಕೊಂಡೋ, ಕಾಲು ಮುರಿದುಕೊಂಡೋ ಮನೆಯ ಬೀಳುವ ದುಃಸ್ಥಿತಿ ಎದುರಾಗಿದೆ.
ಸ್ಥಳೀಯ ನಿವಾಸಿ ಶರಣಪ್ಪ ಗೊಡಚಳ್ಳಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ತಗ್ಗು ಬಿದ್ದಿರುವ ರಸ್ತೆಗಳ ಬಗ್ಗೆ ಮಾತಾಡಿದರೆ ಇಲ್ಲಿ ಅಪರಾಧಿಗಳಾಗುತ್ತೇವೆ. ಇಲ್ಲಿ ಮೂಲ ಸೌಲಭ್ಯದ ಬಗ್ಗೆ ಮಾತನಾಡಿ, ಪ್ರಶ್ನೆ ಮಾಡಿದರೆ ತಪ್ಪಾಗುತ್ತದೆ. ಹಲಗವಾಲಿಯಿಂದ ನಡೆಯುತ್ತಿರುವ ಡಾಂಬರೀಕರಣ ರಸ್ತೆ ಅವೈಜ್ಞಾನಿಕವಾದದ್ದು. ಇದರ ಬಗ್ಗೆ ಮಾತನಾಡಿದರೆ ದೇಶ ಇವನಿಂದಲೇ ಉದ್ಧಾರ ಆಗುವುದು ಅಂತ ಲೇವಡಿ ಮಾಡ್ತಾರ. ಹಿಂಗಿರಬೇಕಾದ್ರ ಊರ ಉಸಾಬರಿ ನಮಗ್ಯಾಕ್? ಅಂತ ನಮ್ಮ ಬೆಳಗಟ್ಟಿ ಜನ ಸುಮ್ಮಿರುತ್ತಾರಾ. ಆದ್ರ ನಮ್ಮೂರ ರಸ್ತೆ ಗುಂಡಿ ಬಿದ್ದರೂ ಸಾವು ಉಚಿತ ಹಾಗೂ ಖಚಿತ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ ಜಿಲ್ಲಾಧಿಕಾರಿ ವರ್ಗಾವಣೆ : ಸುರೇಶ ಹಿಟ್ನಾಳ್ ನೂತನ ಡಿಸಿ; ಕೆಕೆಆರ್‌ಡಿಬಿ ಕಾರ್ಯದರ್ಶಿಯಾಗಿ ನಳಿನಿ ಅತುಲ್ ನೇಮಕ
ಕೊಪ್ಪಳ ಜಿಲ್ಲಾ ಕೆಎಂಆರ್‌ವೇ ಅಧ್ಯಕ್ಷ ಮುದಕಪ್ಪ ಹೊಸಮನಿ ಮಾತನಾಡಿ, “ಕೊಪ್ಪಳ ಶಾಸಕರು, ಸಂಸದರು ಜಿಲ್ಲಾಧಿಕಾರಿಗಳಿಗೆ ಈ ಗ್ರಾಮ ಕಣ್ಣಿಗೆ ಬಿದ್ದಿಲ್ಲ. ತಾಲೂಕಿನ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಶಾಸಕರು ಗಮನ ಹರಿಸುತ್ತಿಲ್ಲ. ಈ ಗ್ರಾಮ ಹಟ್ಟಿ ಗ್ರಾಮ ಪಂಚಾಯಿತಿಗೆ ಬರುತ್ತದೆ. ಇಲ್ಲಿ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದರೆ ಹಲ್ಲೆಗಾಳಾಗುತ್ತವೆ. ಜಿಲ್ಲೆಯ ಕೊನೆಯ ಹಳ್ಳಿ ಇದು. ಬಹಳ ನಿರ್ಲಕ್ಷ್ಯಕ್ಕೊಳಪಟ್ಟಿದೆ ಎಂಬುದೆಕ್ಕೆ ಗುಂಡಿ ಬಿದ್ದಿರುವ ರಸ್ತೆಯೇ ಇದಕ್ಕೆ ಸಾಕ್ಷಿ” ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ಹಾಗೂ ತಾಲೂಕಿನ ಕೊನೆಯ ಹಳ್ಳಿಯಾದ ಬೆಳಗಟ್ಟಿ ಗ್ರಾಮದ ಅಭಿವೃದ್ಧಿ ಹಾಗೂ ಹದಗೆಟ್ಟ ರಸ್ತೆಯನ್ನು ಇನ್ನಾದರೂ ದುರಸ್ತಿ ಮಾಡಿಸುತ್ತಾರೋ ಎಂಬುದುನ್ನು ಕಾದು ನೋಡಬೇಕಿದೆ. ಜನರು ಕೂಡ ಆ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.