ಚಲಿಸುತ್ತಿದ್ದ ಕೆಕೆಆರ್‌ಟಿಸಿ ಬಸ್ಸಿನ ಚಕ್ರ ಸ್ಫೋಟಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ದಾಸನಾಳದ ಹೊರವಲಯದಲ್ಲಿ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ 20 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಂಗಾವತಿ ಸಾರಿಗೆ ಘಟಕಕ್ಕೆ ಸೇರಿದ ಬಸ್ ಕೊಪ್ಪಳದಿಂದ ಗಂಗಾವತಿಯತ್ತ ಸಂಚರಿಸುತ್ತಿದ್ದಾಗ ಬಸ್ಸಿನ ಮುಂಭಾಗದ ಚಕ್ರ ಸ್ಫೋಟಗೊಂಡಿದೆ. ನಿಯಂತ್ರಣ ತಪ್ಪಿದ ಬಸ್ಸನ್ನು ಚಾಲಕ ಮಂಜುನಾಥ ಗಾಣಿಗೇರ ಅವರು ಕೂಡಲೇ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಪರಿಣಾಮ ಬಸ್ ಸುಮಾರು 100 ಮೀಟರ್‌ಗೂ ಹೆಚ್ಚು ದೂರ ತೆವಳಿಕೊಂಡು ಹೋಗಿ ನಿಂತಿದೆ. 20 ಮಂದಿ ಪ್ರಯಾಣಿಕರ ಪ್ರಾಣ ಕಾಪಾಡಿದ್ದಾರೆ.

ಬಸ್ಸಿನ ಚಕ್ರ ಸ್ಫೋಟಗೊಳ್ಳುವ ಕೆಲವೇ ನಿಮಿಷಕ್ಕೂ ಮುನ್ನ ಇದೇ ರಸ್ತೆಯಲ್ಲಿ ಸಚಿವ ಶಿವರಾಜ ತಂಗಡಗಿ ಹಾಗೂ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ತೆರಳಿದ್ದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಗದಗ | ನಿರುದ್ಯೋಗಿ ಯುವಕರಿಗೆ ಸರಕಾರ ಉದ್ಯೋಗ ನೀಡಲಿ: ತೋಟದ
“ಟೈರ್ ಸ್ಫೋಟಗೊಂಡ ಸಂದರ್ಭದಲ್ಲಿ ಬಸ್ನ ಹಿಂದೆ ಅಥವಾ ಎದುರು ಯಾವುದಾದರೂ ವಾಹನಗಳು ಬಂದಿದ್ದರೆ ಊಹಿಸಲಾಗದ ಅಪಾಯ ಉಂಟಾಗುತ್ತಿತ್ತು. ಯಾವುದೇ ವಾಹನಗಳಿಲ್ಲದೆ, ಖಾಲಿ ರಸ್ತೆ ಇದ್ದಿದ್ದರಿಂದ ಬೇರೆ ರೀತಿಯ ಅಪಘಾತಗಳು ಸಂಭವಿಸಿಲ್ಲ” ಎಂದು ಪ್ರಯಾಣಿಕರೊಬ್ಬರು ಹೇಳಿದರು.