ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮುರುಕುಂಬಿ ಗ್ರಾಮದಲ್ಲಿ ದಲಿತರ ವಸತಿ ಪ್ರದೇಶಕ್ಕೆ ನುಗ್ಗಿ, ಗುಡಿಸಲುಗಳಿಗೆ ಬೆಂಕಿ ಹಚ್ಚಿಮ ದಲಿತರ ಮೇಲೆ ಹಲ್ಲೆ ನಡೆಸಿದ್ದ ಮತ್ತು ಅಸ್ಪೃಷ್ಯತೆ ಆಚರಣೆ ಮಾಡಿದ್ದ ಪ್ರಕರಣ 9 ವರ್ಷಗಳ ಹಿಂದೆ ನಡೆದಿತ್ತು. ಪ್ರಕರಣದಲ್ಲಿ 101 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ಮತ್ತು ವಿಚಾರಣೆಯಲ್ಲಿ ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದೆ. ಅಕ್ಟೋಬರ್ 24ರಂದು ಗುರುವಾರ ನ್ಯಾಯಾಲಯವು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಿದೆ ಎಂದು ವರಿಯಾಗಿದೆ.
ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ. ಚಂದ್ರಶೇಖರ ಅವರು ಪ್ರಕರಣದ ವಿಚಾರಣೆ ನಡೆಸಿದ್ದು, 101 ಆರೋಪಿಗಳನ್ನು ಅಪರಾಧಿಗಳು ಎಂದು ಸೋಮವಾರ ಘೋಷಿಸಿದ್ದಾರೆ. ಗುರುವಾರ ಶಿಕ್ಷೆ ಪ್ರಕಟಿಸುವುದಾಗಿ ಹೇಳಿದ್ದು, ತೀರ್ಪು ಕಾಯ್ದಿರಿಸಿದ್ದಾರೆ.
2015ರಲ್ಲಿ ಮುರುಕುಂಬಿ ಗ್ರಾಮದಲ್ಲಿ ಕ್ಷೌರದಂಗಡಿ, ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ವಿಚಾಋವಾಗಿ ಪ್ರಬಲ ಜಾತಿಗಳು ಮತ್ತು ದಲಿತರ ನಡುವೆ ಜಗಳವಾಗಿತ್ತು. ಪೊಲೀಸ್ ಅಧಿಕಾರಿಗಳು ಮುರುಕುಂಬಿಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದರು. ಪ್ರಕರಣ ದಾಖಲಾದ ಸಿಟ್ಟಿನಿಂದ ಸರ್ವಣೀಯರು ರಾತ್ರಿ ಸಮಯದಲ್ಲಿ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ದಲಿತರ ಮೇಲೆ ಹಲ್ಲೆ ನಡೆಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮದ 117 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ನಡುವೆ ಕೆಲ ಆರೋಪಿಗಳು ಸಾವನ್ನಪ್ಪಿದ್ದಾರೆ. ಉಳಿದವರ ಪೈಕಿ 101 ಮಂದಿಯ ವಿರುದ್ಧ ಅರೋಪ ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದ 100 ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಯನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.