ಗಣೇಶ ಚತುರ್ಥಿ ಪ್ರತಿಷ್ಠಾಪನೆ ದಿನ ಹಾಗೂ ವಿಸರ್ಜನೆ ದಿನ ಡಿಜೆ ಬಳಕೆಗೆ ಸುಪ್ರೀಂಕೋರ್ಟ್ ನಿಷೇಧದ ಆದೇಶ ಹೊರಡಿಸಿದ್ದರೂ ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ಗಣೇಶ ವಿಸರ್ಜನೆ ದಿನ (ನಿನ್ನೆ ರಾತ್ರಿ 12-15ರವರೆಗೂ) ಡಿಜೆ ಬಳಕೆ ಮಾಡಿದ್ದು, ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ಧಾರ್ಮಿಕ ಮುಖಂಡರ ಹಾಗೂ ಎಲ್ಲಾ ಧಾರ್ಮಿಕ ಸಂಘಟನೆಗಳಿಗೆ ಶಾಂತಿ ಸಭೆ ಕರೆದು ಡಿಜೆ ಸಿಸ್ಟಮ್‌ಗಳನ್ನು ಬಳಸುವಂತಿಲ್ಲ ಎಂದು ಕಡ್ಡಾಯವಾಗಿ ಸೂಚನೆ ನೀಡಿದ್ದರು. ಆದರೂ ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಡಿಜೆ ಸಿಸ್ಟಮ್‌ನ ಕರ್ಕಶ ಶಬ್ದಕ್ಕೆ ಹೃದ್ರೋಗ ಪೀಡಿತರು, ಗರ್ಭಿಣಿಯರು, ಹಸುಗೂಸುಗಳು ಭಯಗೊಳ್ಳುವಂತ ವಾತಾವರಣ ಸೃಷ್ಟಿಯಾಗಿತ್ತು.
ಡಿಜೆಯ ಅತಿಯಾದ ಶಬ್ದಕ್ಕೆ ಮನೆಯೊಳಗಿನ ಪರಿಕರಗಳು ಅಲ್ಲಾಡುತ್ತಿದ್ದವು. ಮನೆಯ ಅಂಗಳಗಳು ದಗ್ ದಗ್ ಎಂದು ಶಬ್ದ ಮಾಡುತ್ತಿದ್ದವು. ನ್ಯಾಯಾಲಯದ ನಿಷೇಧದ ಆದೇಶವಿದ್ದರೂ ಪೊಲೀಸ್ ಮೌನವಹಿಸಿದ್ಯಾಕೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: ಕೊಪ್ಪಳ | ಆಟೋ ಪಲ್ಟಿ : 65 ವರ್ಷದ ಮಹಿಳೆ ಸಾವು