ರಾಘವೇಂದ್ರ ತೂನಾ ನೇತೃತ್ವದ ‘ನಿರ್ಮಲ ತುಂಗಭದ್ರಾ ಜಲಜಾಗೃತಿ ಅಭಿಯಾನ’ ಸಮಾರೋಪ ಸಮಾವೇಶದಲ್ಲಿ ಗಂಗಾವತಿ ಪಟ್ಟಣದ ಶಾಲಾ ಮಕ್ಕಳು ತೊಡಗಿಸಿಕೊಳ್ಳವಂತೆ ಕೊಪ್ಪಳ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಡಿಡಿಪಿಐ) ಗಂಗಾವತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಎಲ್ಲ ಪ್ರೌಢಶಾಲೆ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚನಾ ಪತ್ರ ಹೊರಡಿಸಿದ್ದದ್ದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಜನವರಿ 8ರಂದು ‘ನಿರ್ಮಲ ತುಂಗಭದ್ರ ಜಲಜಾಗೃತಿ ಅಭಿಯಾನ’ ನಡೆಸಲಾಗಿತ್ತು. ಇದೊಂದು ಖಾಸಗಿ ಮತ್ತು ರಾಜಕೀಯ ಪ್ರೇರಿತ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪಾಲ್ಗೊಳ್ಳುವಂತೆ ಸೂಚಿಸಲು ಕೊಪ್ಪಳ ಶಿಕ್ಷಣ ಇಲಾಖೆಗೆ ಅಧಿಕಾರ ಕೊಟ್ಟವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮತ್ತು ಪಾಲಕರಲ್ಲಿ ಮೂಡಿದೆ. ಈ ಕುರಿತು ತಾಲೂಕು ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಶಿಕ್ಷಣ ಇಲಾಖಾ ಉಪನಿರ್ದೇಶಕರ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ದಲಿತ ಸಂಘಟನೆಯ ಯುವನಾಯಕ ಈದಿನ ಡಾಟ್ ಕಾಮ್ ಜತೆಗೆ ಮಾತನಾಡಿ, ”ಗಂಗಾವತಿಗೂ ‘ನಿರ್ಮಲ ತುಂಗಭದ್ರಾ ಜಲಜಾಗೃತಿ ಅಭಿಯಾನʼಕ್ಕೂ ಏನು ಸಂಬಂಧ? ಎಲ್ಲೋ ಮಾಡಬೇಕಾದ ಅಭಿಯಾನವನ್ನು ಗಂಗಾವತಿಯಲ್ಲಿ ಮಾಡಿದ್ದಾರೆ. ಇದು ಅಭಿಯಾನದ ಮುಂದಾಳತ್ವ ವಹಿಸಿದವರ ಸ್ವಹಿತಾಸಕ್ತಿ ಕಾರಣವೇ ಹೊರತು ಗಂಗಾವತಿಯ ರಕ್ಷಣೆಯಲ್ಲಿ ಕಿಂಚಿತ್ತೂ ಪಾತ್ರವಿರಲಿಲ್ಲ. ಜಿಲ್ಲಾಧಿಕಾರಿ ಅಥವಾ ತಾಲೂಕು ದಂಡಾಧಿಕಾರಿಗಳ ಯಾವುದೇ ನಿರ್ದೇಶನ ಅಥವಾ ಸೂಚನಾ ಪತ್ರವಿಲ್ಲದೆ ಮಕ್ಕಳನ್ನು ಈ ರೀತಿಯ ಖಾಸಗಿ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಲು ಅವಕಾಶ ಇರುವುದಿಲ್ಲ. ಈ ಕುರಿತು ಜ್ಞಾನವಿದ್ದರೂ ಕೊಪ್ಪಳ ಮತ್ತು ಗಂಗಾವತಿ ಶಿಕ್ಷಣಾಧಿಕಾರಿಗಳು ಬಹುದೊಡ್ಡ ಲೋಪವೆಸಗಿದ್ದಾರೆ. ಸರ್ಕಾರದ ವಿರುದ್ಧವೇ ಒಳಸಂಚು ಮಾಡುತ್ತಿರುವ ಕೊಪ್ಪಳ ಡಿಡಿಪಿಐ, ಗಂಗಾವತಿ ಬಿಇಒ ವಿರುದ್ಧ ಜಿಲ್ಲಾಧಿಕಾರಿಯವರು ತನಿಖೆ ಮಾಡಿ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ದೇವದಾಸಿ ಮಹಿಳೆಯರ ಮರುಗಣತಿ ಕ್ರಮ ಸ್ವಾಗತಾರ್ಹ: ದೇವದಾಸಿ ವಿಮೋಚನಾ ಸಂಘದ ಅಧ್ಯಕ್ಷೆ ಹುಲಿಗೆಮ್ಮ
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಹೆರೂರು ಈದಿನ ಡಾಟ್ ಕಾಮ್ ಜತೆಗೆ ಮಾತನಾಡಿ, “ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಆದೇಶದಂತೆ ಮಕ್ಕಳನ್ನು ಜಾಗೃತದಿಂದ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮವು ಯಾವುದೇ ರಾಜಕೀಯ ಪ್ರೇರಿತವಲ್ಲ. ಈ ಬಗ್ಗೆ ಪೂರ್ವಭಾವಿ ಸಭೆಯನ್ನೂ ಮಾಡಿಕೊಂಡಿದ್ದು, ಎಲ್ಲ ಪರಿಸರ ಆಸಕ್ತರೇ ಪಾಲ್ಗೊಂಡಿದ್ದರು. ಉಪನಿರ್ದೇಶಕರಿಗೆ ಮೇಲಧಿಕಾರಿಗಳು ಆದೇಶ ಮಾಡಿರುವ ಕುರಿತಾಗಿಯೂ ಗಮನಕ್ಕೆ ಬಂದಿಲ್ಲ. ಅವರ ಆದೇಶ ಮಾತ್ರ ನಮಗಾಗಿದೆ. ಅದರಂತೆ ಬೇಗನೆ ಕಾರ್ಯಕ್ರಮ ಮುಗಿಸಿ ಮಕ್ಕಳನ್ನು ವಾಪಸ್ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದೆವು. ಅದರಲ್ಲೂ ಪರಿಸರದ ಜಾಗೃತ ಕಾರ್ಯಕ್ರಮ ಆಗಿರುವುದರಿಂದ ಈ ಕಾರ್ಯಕ್ರಮದಲ್ಲಿ ಮಕ್ಕಳು ಪಾಲ್ಗೊಂಡರೆ ಯಾವುದೇ ತಪ್ಪಾಗುವುದಿಲ್ಲ ಅಲ್ಲವೆ?” ಎಂದು ಸಮರ್ಥಿಸಿಕೊಂಡರು.
