ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣವನ್ನು ಕೂಡಿಟ್ಟಿದ್ದ ಮಹಿಳೆಯೊಬ್ಬರು, ಆ ಹಣದಲ್ಲಿ ತಮ್ಮ ಗ್ರಾಮದ ರಸ್ತೆ ದುರಸ್ತಿ ಮಾಡಿಸಿದ್ದಾರೆ. ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಮೂಲಕ ಮಾದರಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಯರೇಹಂಚಿನಾಳ ಗ್ರಾಮದ ಮಹಿಳೆ ಸವಿತಾ ಉಮೇಶ ನಾಗರೆಡ್ಡಿ ಅವರು ತಮಗೆ ದೊರೆತ ಗೃಹಲಕ್ಷ್ಮಿ ಹಣವನ್ನು ಗ್ರಾಮಕ್ಕಾಗಿ ವ್ಯಯಿಸಿದ್ದಾರೆ. ತಮ್ಮ ಗ್ರಾಮ ಯರೇಹಂಚಿನಾಳ ಮತ್ತು ಪಕ್ಕದ ಗ್ರಾಮ ಕೊಟುಮಚಗಿ ನಡುವಿನ 4 ಕಿ.ಮೀ ರಸ್ತೆಗೆ ಚಾಚಿಕೊಂಡಂತೆ ಬೆಳೆದಿದ್ದ ಮುಳ್ಳುಕಂಟಿ, ಬೇಲಿಗಳನ್ನು ಸ್ವಚ್ಛಗೊಳಿಸಿದ್ದಾರೆ.
ಬೇಲಿಗಳು ಬೆಳೆದಿದ್ದರಿಂದ ರಸ್ತೆಯು ಬಹಳ ಕಿರಿದಾಗಿತ್ತು. ರೈತರು, ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಮಹಿಳೆ ಸವಿತಾ ಅವರು ತಮಗೆ ಗೃಹಲಕ್ಷ್ಮಿ ಯೋಜನೆಯಿಂದ ಕಳೆದ 11 ತಿಂಗಳಲ್ಲಿ ದೊರೆತಿದ್ದ 22 ಸಾವಿರ ರೂ.ಗಳನ್ನು ವ್ಯಯಿಸಿ, ಜೆಸಿಬಿ ಕರೆಸಿ, ಮುಳ್ಳುಕಂಟಿಗಳನ್ನು ತೆರವುಗೊಳಿಸಿದ್ದಾರೆ. ರಸ್ತೆಯ ಬದಿಯು ಜನರ ಬಳಕೆಗೆ ದೊರೆಯುವಂತೆ ಮಾಡಿದ್ದಾರೆ.
“ರಸ್ತೆ ಬದಿಯ ಮುಳ್ಳುಕಂಟಿಗಳನ್ನು ತೆರವುಗೊಳಿಸಿ, ರಸ್ತೆಯಲ್ಲಿ ದುರಸ್ತಿ ಮಾಡಿಸಬೇಕೆಂದು ಕ್ಷೆತ್ರದ ಶಾಸಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೆವು. ಆದರೆ, ಯಾವುದೇ ಪ್ರಯೋಜವಾಗಲಿಲ್ಲ. ರಸ್ತೆ ದುರಸ್ತಿಗೆ ಶಾಸಕರು ಆಸಕ್ತಿ ವಹಿಸಲಿಲ್ಲ. ಸವಿತಾ ಅವರು ತಮ್ಮ ಸ್ವಂತ ಹಣ ಬಳಸಿ, ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಂಡಿದ್ದಾರೆ. ಅವರ ಕೆಲಸ ಶ್ಲಾಘನೀಯ” ಎಂದು ರೈತ ಮುಖಂಡ ಅಂದಪ್ಪ ಕೋಳೂರು ಹೇಳಿರುವುದಾಗಿ ‘ಪಿವಿ‘ ವರದಿ ಮಾಡಿದೆ.