ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮಕ್ಕಳಲ್ಲಿ ಅರಿವು ಮೂಡಿಸಲು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಪ್ಪಳ ಪ್ರಾದೇಶಿಕ ಕಚೇರಿ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಶಾಲಾ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳಿಗೆ ಜೂನ್ 6ರಂದು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಜೂನ್ 5 ರಂದು ವಿಶ್ವದಾದ್ಯಂತ ʼವಿಶ್ವ ಪರಿಸರ ದಿನಾಚರಣೆʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, “ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು” ಎಂಬುವುದು ಈ ಬಾರಿಯ ಘೋಷ ವಾಕ್ಯವಾಗಿದೆ. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆಗಾಗಿ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಹಾಗೂ ಸಮೂಹ ಪರಿಸರ ಗೀತ ಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಈ ಎಲ್ಲಾ ಸ್ಪರ್ಧೆಗಳು ಕೊಪ್ಪಳ ತಹಶೀಲ್ದಾರರ ಕಚೇರಿ ಆವರಣದಲ್ಲಿರುವ ಕೊಪ್ಪಳ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಶಾಲಾ ಶಿಕ್ಷಣ ಇಲಾಖೆಯಲ್ಲಿ ನಡೆಯಲಿವೆ.
ಚಿತ್ರಕಲೆ ಸ್ಪರ್ಧೆ:
ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವ ವಿಷಯದ ಕುರಿತು ಚಿತ್ರ ಕಲೆ ಸ್ಪರ್ಧೆಯನ್ನು ಜೂ. 6ರ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯು 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ 8, 9 ಮತ್ತು 10ನೇ ತರಗತಿ ವಿಧ್ಯಾರ್ಥಿಗಳಿಗೆ ಎರಡು ವರ್ಗಗಳಲ್ಲಿ ನಡೆಯಲಿದ್ದು, ಈ ಸ್ಪರ್ಧೆಗೆ ಭಾಗವಹಿಸುವವರಿಗೆ ಮಂಡಳಿಯಿಂದ ಡ್ರಾಯಿಂಗ್ ಶೀಟ್ ಒದಗಿಸಲಾಗುವುದು. ಬಣ್ಣ ಮತ್ತು ಇತರೆ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳು ತರಬೇಕು. ಒಂದು ಶಾಲೆಯಿಂದ ಗರಿಷ್ಠ 6 ವಿದ್ಯಾರ್ಥಿಗಳು ಒಂದೊಂದು ವಿಭಾಗದಲ್ಲಿ ಭಾಗವಹಿಸಬಹುದು.
ಪ್ರಬಂಧ ಸ್ಪರ್ಧೆ:
‘ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟಲು ನನ್ನ ಪತ್ರ’ ಎಂಬ ವಿಷಯದ ಬಗ್ಗೆ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಅಂದು ಬೆಳಿಗ್ಗೆ 11.30ಕ್ಕೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಮಂಡಳಿಯಿಂದ ಕಾಗದವನ್ನು ಒದಗಿಸಲಾಗುವುದು ಹಾಗೂ ಒಂದು ಶಾಲೆಯಿಂದ ಗರಿಷ್ಠ ಆರು ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿರುತ್ತದೆ.
ಇದನ್ನೂ ಓದಿ: ಕೊಪ್ಪಳ | ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಅಪಹರಣ ಪ್ರಕರಣ; ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಸಮೂಹ ಪರಿಸರ ಗೀತೆ ಗಾಯನ:
‘ಪರಿಸರ ಸ್ನೇಹಿ ಗೀತೆಗಳ’ ಸಮೂಹ ಪರಿಸರ ಗೀತ ಗಾಯನ ಸ್ಪರ್ಧೆಯನ್ನು 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಅಂದು ಮಧ್ಯಾಹ್ನ 12ಕ್ಕೆ ಹಮ್ಮಿಕೊಳ್ಳಲಾಗಿದ್ದು, ಒಂದು ತಂಡದಲ್ಲಿ ಸ್ಪರ್ಧಿಗಳು ನಾಲ್ಕು ಜನರಿಂದ ಹೆಚ್ಚಿರಬಾರದು. ಗಾಯನವೂ ನಾಲ್ಕು ನಿಮಿಷಕ್ಕಿಂತ ಹೆಚ್ಚು ಇರಬಾರದು ಹಾಗೂ ಒಂದು ಶಾಲೆಯಿಂದ ಗರಿಷ್ಠ ಎರಡು ತಂಡಗಳು ಭಾಗವಹಿಸಬಹುದು.
ಸ್ಪರ್ಧೆಗಳಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಮುಖ್ಯ ಕಾರ್ಯಕ್ರಮದ ದಿನದಂದು ಬಹುಮಾನ ವಿತರಣೆ ಮಾಡಲಾಗುವುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಪ್ಪಳ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.